ಐಸಿಸಿ ಒಡಿಐ ವಿಶ್ವಕಪ್ ಟೂರ್ನಿಯ ಫೈನಲ್ಗೆ ಪಾಕಿಸ್ತಾನ ತಲುಪುವುದು ಅಸಾಧ್ಯ ಎಂದು ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಈ ಬಾರಿ ಸೆಮಿಫೈನಲ್ಗೆ ತಲುಪಬಲ್ಲ ನಾಲ್ಕು ತಂಡಗಳನ್ನು ಆಯ್ಕೆ ಮಾಡಿದ್ದಾರೆ.
ಐಸಿಸಿ ಶ್ರೇಯಾಂಕದಲ್ಲಿ ಎರಡನೇ ಸ್ಥಾನದ ಮೂಲಕ ಪಾಕಿಸ್ತಾನ ವಿಶ್ವಕಪ್ ಟೂರ್ನಿಗೆ ಪ್ರವೇಶ ಮಾಡಿದೆ. ಟ್ರೋಫಿ ಗೆಲ್ಲಲು ಎಲ್ಲ 9 ತಂಡಗಳ ವಿರುದ್ಧ ಕಾದಾಟ ನಡೆಸಲಿರುವ ಪಾಕಿಸ್ತಾನ, ವಿಶ್ವಕಪ್ ಟೂರ್ನಿಯ ಎರಡು ಅಭ್ಯಾಸ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿರುವುದಲ್ಲದೆ ಏಷ್ಯಾಕಪ್ ಟೂರ್ನಿಯ ಫೈನಲ್ ಹಂತ ತಲುಪಲು ಎಡವಿತ್ತು.
ನದಿರ್ ಅಲಿ ಪಾಡ್ಕಾಸ್ಟ್ನಲ್ಲಿ ಪಾಕಿಸ್ತಾನದ ಮಾಜಿ ತರಬೇತುದಾರ ಮೊಹಮ್ಮದ್ ಯೂಸಫ್ ಅವರನ್ನು ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಬಗ್ಗೆ ನಿಮ್ಮ ನಿರೀಕ್ಷೆ ಏನು ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಪಾಕ್ ಮಾಜಿ ನಾಯಕ, ಪಾಕ್ ಈ ಬಾರಿ ಫೈನಲ್ ಹಂತ ತಲುಪುವುದು ಅಸಾಧ್ಯ ಎಂದಿದ್ದಾರೆ.
“2023ರ ಐಸಿಸಿ ಪುರುಷರ ವಿಶ್ವಕಪ್ ಟೂರ್ನಿಯ ಫೈನಲ್ ಹಂತ ತಲುಪುವುದು ಪಾಕಿಸ್ತಾನಕ್ಕೆ ಕಠಿಣವಾದ ಸಂಗತಿ ಆಗಿದೆ. ನನ್ನ ಪ್ರಕಾರ ಪಾಕಿಸ್ತಾನ, ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ಸ್ಗೆ ತಲುಪಲಿವೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕೂಡ ಉತ್ತಮ ಪ್ರದರ್ಶನ ತೋರುವ ಮೂಲಕ ಯಾವ ತಂಡಕ್ಕಾದರೂ ಆಘಾತ ನೀಡುವ ಸಾಮರ್ಥ್ಯ ಹೊಂದಿವೆ,” ಎಂದು ಪಾಕ್ ಮಾಜಿ ಆಟಗಾರ ಹೇಳಿದ್ದಾರೆ.