ಮಲಯಾಳಂ ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್ಲಾಲ್ ರಾಜಿನಾಮೆ ನೀಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗೆ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಸಲ್ಲಿಕೆ ಮಾಡಿದ ಬಳಿಕ ದೊಡ್ಡ ಮಟ್ಟದಲ್ಲಿ ಬದಲಾವಣೆ ನಡೆಯುತ್ತಿದೆ.
ಮಲಯಾಳಂ ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೋಹನ್ಲಾಲ್ ಮಾತ್ರವಲ್ಲದೇ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಸಾಮೂಹಿಕವಾಗಿ ರಾಜಿನಾಮೆ ನೀಡಿದ್ದಾರೆ ಎಂದು ವರದಿ ಆಗಿದೆ. ಮಾಲಿವುಡ್ ಸಿನಿಮಾ ರಂಗದ ಪ್ರಭಾವಿಗಳ ಮೇಲೂ ಗಂಭೀರ ಆರೋಪಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸ್ಥಾನಗಳಿಗೆ ರಾಜಿನಾಮೆ ನೀಡಲಾಗುತ್ತಿದೆ.
ಮಲಯಾಳಂ ಚಿತ್ರರಂಗದಲ್ಲಿ ಈ ಹಿಂದೆ ಖ್ಯಾತ ನಟಿಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಳಿಕ ಹೇಮಾ ಸಮಿತಿ ರಚನೆ ಆಗಿತ್ತು. ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ಸಮಿತಿಯು ವರದಿ ಸಲ್ಲಿಸಿದೆ. ಆ ವರದಿಯಲ್ಲಿ ಶಾಕಿಂಗ್ ಸಂಗತಿಗಳು ಬಯಲಾಗಿದ್ದು, ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್, ಲೈಂಗಿಕ ಕಿರುಕುಳ ಹೇರಳವಾಗಿದೆ ಎಂಬುದು ಹೇಮಾ ಸಮಿತಿಯ ವರದಿಯಿಂದ ಬಹಿರಂಗವಾಗಿದೆ.
ಹೇಮಾ ಸಮಿತಿ ವರದಿ ಸಲ್ಲಿಸಿದ ಬಳಿಕ ಪಿಣರಾಯಿ ವಿಜಯನ್ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ 7 ಜನರ ವಿಶೇಷ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ. ನಟಿಯರು ಎದುರಿಸಿದ ಕಿರುಕುಳದ ಬಗ್ಗೆ ಈ ತಂಡ ತನಿಖೆ ನಡೆಸಲಿದೆ.
ಹೇಮಾ ಸಮಿತಿ ವರದಿ ಸಲ್ಲಿಕೆ ಆದ ನಂತರ ಮಲಯಾಳಂ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿ ಆಗಿದೆ. ಹಲವು ನಟಿಯರು ತಮಗೆ ಎದುರಾದ ಲೈಂಗಿಕ ಕಿರುಕುಳದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.