ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆತ್ಮಹತ್ಯೆಗೆ ಯತ್ನಿಸಿದ ನಾಗಮಂಗಲ ಡಿಪೋ (Nagamangala Bus Depot) ಸಾರಿಗೆ ನೌಕರ ಜಗದೀಶ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಹೆಚ್ಡಿಕೆ, ಆತ್ಮಹತ್ಯೆ ಯತ್ನಿಸಿದ KSRTC ನೌಕರ ವೆಂಟಿಲೇಟರ್ನಲ್ಲಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,
ಇನ್ನೂ 48 ಗಂಟೆ ಐಸಿಯುನಲ್ಲೇ ಇಡಬೇಕಾಗುತ್ತದೆ ಅಂತಾ ವೈದ್ಯರು ಹೇಳಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದು 50 ದಿನ ಆಗಿಲ್ಲ. ಆಗಲೇ ಇಷ್ಟು ದ್ವೇಷದ ರಾಜಕಾರಣ ಶುರುವಾಗಿದೆ. ದುಡ್ಡು ತೆಗೆದುಕೊಂಡು ವರ್ಗಾವಣೆ ಮಾಡ್ತಿದ್ದಾರೆ. ಚುನಾವಣೆಗೆ ಖರ್ಚು ಮಾಡಿದ ಹಣ ಮತ್ತೆ ವಾಪಸ್ ಪಡೆಯೋದಕ್ಕೆ ವರ್ಗಾವಣೆ ದಂಧೆ ಶುರುಮಾಡಿದ್ದಾರೆ. ಆದ್ರೆ ಜೀವಗಳ ಜೊತೆ ಚೆಲ್ಲಾಟ ಆಡುವ ಇಂತಹ ಚಿಲ್ಲರೆ ರಾಜಕಾರಣ ಮಾಡೋದು ಸರಿಯಲ್ಲ. ಇದನ್ನ ಸುಮ್ಮನೆ ಬಿಡಲ್ಲ. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರಿಂದ ಒತ್ತಡ:
ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಕುಟುಂಬ JDS ನಿಷ್ಠಾವಂತ ಕಾರ್ಯಕರ್ತ. ಜಗದೀಶ್ ಪತ್ನಿ ಪಂಚಾಯಿತಿ ಸದಸ್ಯೆ. ಹೀಗಾಗಿ ಕಿರುಕುಳ ನೀಡಿದ್ದಾರೆ. ಈ ಸರ್ಕಾರ ಏನು ಶಾಶ್ವತನಾ? ಅಧಿಕಾರದ ದರ್ಪ ಈ ಮಟ್ಟಕ್ಕೆ ಹೋಗಬಾರದು. ಕೃಷಿ ಸಚಿವರ ಛೇಲಾ ಅವನೂ ಕೂಡ ರೌಡಿ ಅಂತೆ. ಅವನಿಂದ ಜಗದೀಶ್ ಕುಟುಂಬದ ಮೇಲೆ ಒತ್ತಡವಿದೆ. ಜಗದೀಶ್ ಪತ್ನಿಗೆ ಕಾಂಗ್ರೆಸ್ಗೆ ಬೆಂಬಲಿಸಲು ಒತ್ತಡ ಹಾಕಿದ್ದಾರೆ. ಡೆತ್ನೋಟ್ ನಲ್ಲಿ ನಾಗಮಂಗಲದ ಶಾಸಕರ ಒತ್ತಡವೇ ಕಾರಣ ಅಂತಾ ಬರೆದಿದ್ದಾನೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಇಂತಹ ಮಂತ್ರಿಯನ್ನ ಸರ್ಕಾರದಿಂದ ವಜಾಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.