ಮದುವೆ ಹೋಗಬೇಕು ಎಂದು ಜನರಲ್ ಟಿಕೆಟ್ ಪಡೆದ ಮಹಿಳೆ ತಿಳಿಯದೆ ಎಸಿ ಕೋಚ್ ಗೆ ಹತ್ತಿದ್ದಕ್ಕೆ ಕೋಪಗೊಂಡ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ ಮಹಿಳೆಯನ್ನು ಚಲಿಸುವ ರೈಲಿನಿಂದ ಹೊರ ದಬ್ಬಿರುವ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ.
ಫರೀದಾಬಾದ್ನ ಎಸ್ಜಿಜೆಎಂ ನಗರದ ನಿವಾಸಿ 40 ವರ್ಷದ ಭಾವನ ಎಂಬ ಮಹಿಳೆಯನ್ನು ಚಲಿಸುವ ರೈಲಿನಿಂದ ಹೊರಕ್ಕೆ ತಳ್ಳಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆ ಜನರಲ್ ಟಿಕೇಟ್ ಪಡೆದು ಗೊತ್ತಿಲ್ಲದೆ ಎಸಿ ಕೋಚ್ಗೆ ಹತ್ತಿದ್ದಾರೆ. ಚೆಕ್ಕಿಂಗ್ ಮಾಡಲು ಬಂದ ಟಿಟಿಇ, ಆಕೆಯ ಬ್ಯಾಗ್ ಮತ್ತು ಇತರ ವಸ್ತುಗಳನ್ನು ಕಂಡು ಗದರಿದ್ದಾನೆ. ಬಳಿಕ ಟಿಕೆಟ್ ನೋಡಿ, ಇಲ್ಲಿ ಏಕೆ ಹತ್ತಿದೆ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಮಹಿಳೆ ದಂಡವನ್ನು ತೆಗೆದುಕೊಳ್ಳಿ ತಿಳಿಯಲಿಲ್ಲ ಎಂದರು ಸುಮ್ಮನಾಗದ ಅಧಿಕಾರಿ, ಆಕೆಯ ಲಗೇಜ್ ಎಸೆದು, ಏಕಾಏಕಿ ಚಲಿಸುವ ರೈಲಿನಿಂದ ಹೊರದಬ್ಬಿದ್ದಾನೆ.
ಮೊದಲು ಮಹಿಳೆಯ ಸಾಮಾನು ಸೇರಿದಂತೆ ಇತರೆ ವಸ್ತುಗಳನ್ನು ಹೊರಗೆ ಎಸೆದ ಟಿಟಿಇ, ಬಳಿಕ ಚಲಿಸುವ ರೈಲಿನಿಂದ ಆಕೆಯನ್ನು ತಳ್ಳಿದ್ದಾನೆ. ರೈಲಿನಿಂದ ಕೆಳಕ್ಕೆ ಬಿದ್ದ ಮಹಿಳೆ ಪ್ಲಾಟ್ಫಾರ್ಮ್ ಮಧ್ಯೆ ಸಿಲುಕಿದ್ದು, ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಮಹಿಳೆ ರೈಲಿನಿಂದ ಕೆಳಗೆ ಬಿದ್ದು ರೈಲು ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿಕೊಂಡಿದ್ದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ತಕ್ಷಣ ಚೈನ್ ಎಳೆದು ರೈಲನ್ನು ನಿಲ್ಲಿಸಿ ರೈಲು ಆಕೆಯನ್ನು ರಕ್ಷಿಸಿದ್ದಾರೆ.
ಪ್ರಕರಣದ ಬೆನ್ನಲ್ಲೇ ಟಿಟಿಇ ವಿರುದ್ಧ ಜಿಆರ್ಪಿಯಿಂದ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆದರೆ ಈ ಘಟನೆ ನಡೆದ ಕೆಲವೇ ಸಮಯದಲ್ಲಿ ಟಿಟಿಇ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.