ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ 24 ಟ್ರಸ್ಟ್ ಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿವರ್ಷ ಈ ಟ್ರಸ್ಟ್ಗಳ ಕಾರ್ಯ ಚಟುವಟಿಕೆಗಾಗಿ ಅನುದಾನ ಒದಗಿಸಲಾಗುತ್ತಿದೆ. ಈ ಟ್ರಸ್ಟ್ ಗಳು ನಡೆಸುವ ಕಾರ್ಯ ಚಟುವಟಿಕೆಗಳು ಮತ್ತು ಅವುಗಳ ಕುಂದು ಕೊರತೆ ಹಾಗೂ ಅವುಗಳ ಪರಿಹಾರಗಳನ್ನು ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಸಮಾಲೋಚನಾ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಸಿದರು.
ಪ್ರತಿಯೊಂದು ಟ್ರಸ್ಟ್ ಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಜಿಲ್ಲಾ ಪ್ರವಾಸ ಮಾಡುವ ವೇಳೆ ಆಯಾ ಜಿಲ್ಲೆಗಳಲ್ಲಿರುವ ಟ್ರಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಬೆಟಗೇರಿ ಕೃಷ್ಣಶರ್ಮರ ಮನೆಯನ್ನು ಸ್ಮಾರಕವಾಗಿಸುವುದರ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ಸಚಿವರು ಅದಕ್ಕೆ ಪೂರಕವಾಗಿ ಸ್ಪಂದಿಸಿ ಈ ಬಗ್ಗೆ ವಿವರಗಳನ್ನು ತರಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಗಳದನಾಥ ಮತ್ತು ರಾಜ ಪುರೋಹಿತ ಟ್ರಸ್ಟ್ ಗಳು ಕಟ್ಟಡ ನಿರ್ಮಾಣಕ್ಕೆ ಎರಡು ಕೋಟಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸಚಿವರ ಗಮನಕ್ಕೆ ತಂದರು. ಹಾಲಬಾವಿ ಟ್ರಸ್ಟ್ ನವರು ಹಲಭಾವಿ ಅವರ ಹೆಸರಿನಲ್ಲಿ ಆರ್ಟ್ ಗ್ಯಾಲರಿ ಒಂದನ್ನು ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯನ್ನು ಸಚಿವರ ಮುಂದಿಟ್ಟರು. ನಿಜಲಿಂಗಪ್ಪ ಟ್ರಸ್ಟ್ ಪರವಾಗಿ ಮಾಜಿ ಸಂಸದ ಹನುಮಂತಪ್ಪ (Ex Minister Hanumantappa) ಅವರು ಮಾತನಾಡಿ ಸರ್ಕಾರಿ ಅಧಿಕಾರಿಗಳ ನೇಮಕದ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಕೋರಿದರು.
ಸಚಿವ ಶಿವರಾಜ್ ತಂಗಡಗಿ ಅವರು ಮಾತನಾಡಿ, ಎಲ್ಲಾ ಟ್ರಸ್ಟ್ ಗಳ ಮನವಿಗಳನ್ನು ತಾವು ಅತ್ಯಂತ ಸಕಾರಾತ್ಮಕ ದೃಷ್ಟಿಯಿಂದಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಟ್ರಸ್ಟ್ ಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಅನುದಾನ ಹೆಚ್ಚಿಸಲು ತಾವು ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಅನುದಾನವನ್ನು ಕೊಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.