ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಆದರೆ ಇದೀಗ ವರುಣ ಕೊಂಚ ಬಿಡುವು ನೀಡಿದ್ದಾನೆ. ಬೆಂಗಳೂರಿನಲ್ಲೂ ಬಹುತೇಕ ಮೋಡ ಕವಿದ ವಾತಾವರಣವಿದೆ.
ಆದರೆ ಹವಾಮಾನ ಇಲಾಖೆ ವರದಿ ಪ್ರಕಾರ ಕರ್ನಾಟಕದ ಉತ್ತರ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರದ ಕಾಲ ಮಳೆಯಾಗಲಿದೆ. ಜೊತೆಗೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಧಾರವಾಡ, ಬೀದರ್, ಗದಗ, ರಾಯಚೂರು, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿಯಷ್ಟಿದೆ. ಮುಂದಿನ ಕೆಲವು ದಿನದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಲಿದೆ. ಮೇ 31 ರಂದು ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ.