ರೈತರ ಸಮಸ್ಯೆಗೆ ನಿಜವಾಗಿ ಸ್ಪಂದಿಸುವ ಕಾರ್ಯವು ಕಾವೇರಿ ಮಾತೆಯದ್ದಾಗಿದೆ. ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಪೂಜೆ ಹಾಗೂ ಬಾಗಿನ ಸಲ್ಲಿಸಿದಂತಹ ಅವಿಸ್ಮರಣೀಯ ದಿನವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದರು.
ಈ ನಾಡಿನಲ್ಲಿ ಬಹುಶ ಲಕ್ಷಾಂತರ ಅಣೆಕಟ್ಟುಗಳಿದ್ದು, ರಾಜ್ಯದಲ್ಲೂ ಸಹ ನೂರಾರು ಅಣೆಕಟ್ಟುಗಳಿವೆ. ಆದರೆ ಕೆ ಆರ್ ಎಸ್ ನ ಕಾವೇರಿ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಯಾಗಿದ್ದು, ಒಂದು ಭಾವನಾತ್ಮಕ ಅಣೆಕಟ್ಟಾಗಿದೆ. ಇದಕ್ಕಿಂತ ದೊಡ್ಡ ಅಣೆಕಟ್ಟುಗಳು ರಾಜ್ಯದಲ್ಲಿ ಇದ್ದರೂ ಸಹ ಕೆ ಆರ್ ಎಸ್ ನಷ್ಟು ಮನಸೆಳೆದಿರುವ ಅಣೆಕಟ್ಟು ಯಾವುದು ಇಲ್ಲ. ಇಂತಹ ಅಣೆಕಟ್ಟಿನ ನಿರ್ಮಾಣಕ್ಕೆ ಕಾರಣರಾಗಿರುವಂತಹ ನಾಲ್ವಡಿ ಕೃಷ್ಣ ರಾಜ ಒಡೆಯರ್ ಮಹಾರಾಜರು ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಅವರ ಕೀರ್ತಿಯನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಎಂದರು.
ನಮ್ಮ ಸರ್ಕಾರವು ಕೇವಲ ಆಡಳಿತ ಮಾಡಲಿಕ್ಕೆ ಮಾತ್ರ ಬಂದಿಲ್ಲ. ಜಿಲ್ಲೆಯ ಎಲ್ಲಾ ರೈತರ ಪರವಾದ ಯೋಜನೆಗಳನ್ನು ನೀಡಿ, ಜನತೆಯ ಅಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡುತ್ತೇವೆ ಎಂದರು.
ಕಳೆದ ಬೇಸಿಗೆಯಲ್ಲಿ ಬರಗಾಲ ಇದ್ದರೂ ಕೂಡ ಜಿಲ್ಲೆಗೆ ಬರದ ತೊಂದರೆ ರೈತರಿಗೆ ತಟ್ಟದಂತೆ 5 ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಒಳಿತು ಮಾಡಿದ್ದೇವೆ. ರೈತರಿಗೆ ಬಿತ್ತನೆಬೀಜ, ಗೊಬ್ಬರ, ಕೀಟನಾಶಕ ನೀಡುವ ಮೂಲಕ ಬೇಸಿಗೆಯಲ್ಲಿ ಬಂದಂತಹ ಬರಗಾಲವನ್ನು ಯಾವುದೇ ಸಮಸ್ಯೆಯಿಲ್ಲದೆ ಬಗೆ ಹರಿಸಿದ ಹೆಮ್ಮೆ ನಮ್ಮ ಸರ್ಕಾರದ್ದಾಗಿದೆ ಎಂದರು.
ಮಾನ್ಯ ಮುಖ್ಯಮಂತ್ರಿಯವರು ಕೆ ಆರ್ ಎಸ್ ಗೆ ಕಾವೇರಿ ಮಾತೆಗೆ 3 ನೇ ಬಾರಿ ಬಾಗಿನವನ್ನು ಅರ್ಪಿಸುವ ಸುಯೋಗ ಇಂದು ಒದಗಿ ಬಂದಿದೆ ಎಂದರು.
ದೇವರ ಕೃಪೆಯಿಂದ ಇಂದು ಕೆ ಆರ್ ಎಸ್ ಅಣೆಕಟ್ಟು ತುಂಬಿರುವ ಅದ್ಭುತವಾದ ಘಳಿಗೆಯಲ್ಲಿ ಈ ನಾಡಿನ ಕಾವೇರಿ ತಾಯಿಗೆ ನಿಮ್ಮೆಲ್ಲರ ಸಮ್ಮುಖದಲ್ಲಿ ಬಾಗಿನವನ್ನು ಅರ್ಪಿಸಲಾಗಿದೆ. ಎಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದರು.
ಕರ್ನಾಟಕ ಹಾಗೂ ತಮಿಳುನಾಡಿನ ಸಮಸ್ಯೆಯನ್ನು ಬಗೆ ಹರಿಸಲು ಸುಪ್ರೀಂ ಕೋರ್ಟ್ ನ ಆದೇಶದ ಮೇರೆಗೆ 2 ಕಮಿಟಿಯನ್ನು ಮಾಡಲಾಗಿದ್ದು, ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಸಹ ರೈತರ ಯಾವುದೇ ಸಮಸ್ಯೆಯಲ್ಲೂ ಕೂಡ ಜೊತೆ ನಿಂತು ಬಗೆಹರಿಸಲಾಗುವುದು. ದೇಶದ ಆಡಳಿತವನ್ನು ನಿರ್ಧಾರ ಮಾಡುವಂತದ್ದು ಜನತೆಯೇ ವಿನಃ ಯಾವುದೇ ಅಧಿಕಾರವಲ್ಲ ಎಂದರು.
ವಿಶ್ವ ದರ್ಜೆಯಲ್ಲಿ ಬೃಂದಾವನವನ್ನು ನಿರ್ಮಾಣ ಮಾಡಲಾಗುವುದು. ಮಂಡ್ಯ ಜಿಲ್ಲೆ ರೈತರ ಜಿಲ್ಲೆಯಾಗಿದ್ದು ನೂತನವಾಗಿ ಸಕ್ಕರೆ ಕಾರ್ಖಾನೆ ಹಾಗೂ ಕೃಷಿ ವಿಶ್ವ ವಿದ್ಯಾನಿಲಯವನ್ನು ಕಟ್ಟಿಸಲಾಗುವುದು. ಎಲ್ಲಾ ವಿಚಾರದಲ್ಲೂ ನಮ್ಮ ಸರ್ಕಾರ ಬದ್ಧತೆಯನ್ನು ತೋರುತ್ತದೆ ಎಂದರು.