ಬಿಹಾರ: ಮಹಿಳೆಯೊಬ್ಬರು 10 ವರ್ಷ ಗಂಡನ ಜೊತೆ ಸಂಸಾರ ನಡೆಸಿ ಎರಡು ಮಕ್ಕಳಿಗೆ ಜನ್ಮ ನೀಡಿದ ಬಳಿಕ ಪತಿಯ ತಂಗಿಯನ್ನೇ ವಿವಾಹವಾದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
32 ವರ್ಷದ ಶುಕ್ಲಾ ದೇವಿ ಪತಿಯ ತಂಗಿಯಾಗಿರುವ 18 ವರ್ಷದ ಸೋನು ದೇವಿಯನ್ನು ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಗಂಡನಿಂದ ಬೇರ್ಪಟ್ಟ ಬಳಿಕ ಕಳೆದ ಆರು ತಿಂಗಳ ಹಿಂದೆ ಸ್ವಂತ ನಾದಿನಿಯನ್ನೇ ಶುಕ್ಲಾ ದೇವಿ ವಿವಾಹವಾಗಿ ಪರಸ್ಪರ ಒಟ್ಟಿಗೆ ಬದಕಲು ಆರಂಭಿಸಿದ್ದಾರೆ.
ಶುಕ್ಲಾ ದೇವಿ ಬಿಹಾರದ ಸಮಷ್ಟಿಪುರ ಜಿಲ್ಲೆಯ ನಿವಾಸಿಯಾಗಿರುವ ಪ್ರಮೋದ್ ದಾಸ್‌ನನ್ನು ಮದುವೆಯಾಗಿದ್ದರು. ದಂಪತಿ ಮಧ್ಯೆ ಬಿರುಕು ಮೂಡಿದ ಪರಿಣಾಮ ಪರಸ್ಪರ ಬೇರೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇದೀಗ ನಾದಿನಿಯನ್ನೇ ಮದುವೆಯಾಗಿ ಜತೆಗೆ ವಾಸವಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶುಕ್ಲಾ ದೇವಿ, ‘ನಾವಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತೇವೆ. ಹೀಗಾಗಿ ನಾವು ಮದುವೆಯಾಗಿದ್ದೇವೆ. ಆತ ನನ್ನ ಗಂಡ ಆಗಿದ್ದರೆ ಏನಂತೆ? ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ವಾಸಿಸುತ್ತೇನೆ. ನಾವಿಬ್ಬರೂ ಮದುವೆಯಾದ ನಂತರ ಬಹಳ ಖುಷಿಯಾಗಿದ್ದೇವೆ. ಸೋನಿ ಬಹಳ ಒಳ್ಳೆಯ ಗೆಳತಿ’ ಎಂದು ಹೇಳಿಕೊಂಡಿದ್ದಾರೆ.
ದೇವಿ ಪತಿ ಪ್ರಮೋದ್ ದಾಸ್ ಮಾತನಾಡಿ, ‘ನನ್ನ ಪತ್ನಿ ಮತ್ತು ತಂಗಿಯ ಈ ಸಂಸಾರಕ್ಕೆ ತನ್ನ ಆಕ್ಷೇಪವಿಲ್ಲ. ಅವಳು ಖುಷಿಯಾಗಿದ್ದರೆ ನಾನೂ ಸಂತಸದಿಂದ ಇರುತ್ತೇನೆ. ಅವರಿಬ್ಬರೂ ಜತೆಯಾಗಿ ವಾಸಿಸಲು ಆರಂಭಿಸಿದ್ದಾರೆ’ ಎಂದು ಹೇಳಿದ್ದಾರೆ.
ಶುಕ್ಲಾ ದೇವಿ ತನ್ನ ನಾದಿನಿ ಜೊತೆ ವಿವಾಹವಾದ ನಂತರ ಹೆಸರನ್ನು ಸೂರಜ್ ಕುಮಾರ್ ಎಂದು ಬದಲಿಸಿಕೊಂಡಿದ್ದಾರೆ. ಅಲ್ಲದೇ ಸೋನುಗೆ ತಾನು ಗಂಡನೆಂಬ ಭಾವನೆ ಬರಲು ತಲೆ ಕೂದಲನ್ನು ಕೂಡ ಕತ್ತರಿಸಿಕೊಂಡಿದ್ದಾರೆ. ಜೊತೆಗೆ ಗಂಡಸರಂತೆ ಉಡುಪುಗಳನ್ನು ಧರಿಸಲು ಆರಂಭಿಸಿದ್ದಾರೆ.
ಶುಕ್ಲಾ ದೇವಿ ಮತ್ತು ಸೋನು ಪ್ರತ್ಯೇಕವಾಗಿ ಮನೆ ಮಾಡಿ ಸುಖ ಸಂಸಾರದಲ್ಲಿದ್ದಾಗ ಸೋನುವಿನ ತಂದೆ ತಾಯಿ ಬಂದು ಆಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ ಎಂದು ಶುಕ್ಲಾ ದೇವಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾದ ನಂತರ ಘಟನೆ ಬೆಳಕಿಗೆ ಬಂದಿದೆ.