ಚೆನ್ನೈ: ರಾಜ್ಯಸಭಾ ಸಂಸದರ ಮಗಳು ಪಾದಚಾರಿ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ತನ್ನ ಬಿಎಂಡಬ್ಲ್ಯೂ ಕಾರು ಹರಿಸಿ, ಆತ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಹಿಟ್ ಆಯಂಡ್ ರನ್ ಪ್ರಕರಣದಲ್ಲಿ ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪುಣೆಯ ಪೋಶೆ ಕಾರು ಅಪಘಾತದ ಒಂದು ತಿಂಗಳ ನಂತರ ನಡೆದ ಹೈಪ್ರೊಫೈಲ್ ಕೇಸ್ ಇದಾಗಿದೆ. ಆಂಧ್ರಪ್ರದೇಶದ ವೈಎಸ್ಆರ್ಸಿಪಿ ಸಂಸದ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ ತಮ್ಮ ಸ್ನೇಹಿತರೊಟ್ಟಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದಾಗ ಫುಟ್ಪಾತ್ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಹತ್ತಿಸಿದ್ದಾರೆ, ಈ ವೇಳೆ ಕುಡಿದ ಮತ್ತಿನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಕುಡಿದ ಮತ್ತಿನಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಚೆನ್ನೈನ ಬೆಸೆಂಟ್ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ 24 ವರ್ಷದ ಪೇಂಟರ್ ಸೂರ್ಯ ಎಂಬಾತನ ಮೇಲೆ ಕಾರು ಹರಿಸಿದ್ದಾರೆ. ಘಟನೆ ನಂತ್ರ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಸೂರ್ಯ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ.
ಘಟನೆ ನಂತರ ಸ್ಥಳೀಯರು ಜೆ-5 ಶಾಸ್ತ್ರಿನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಶರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಅಪಘಾತ ಮಾಡಿದ ಬಿಎಂಡಬ್ಲ್ಯೂ ಕಾರು ರಾಜ್ಯಸಭಾ ಸಂಸದ ಬೀಡಾ ಮಸ್ತಾನ್ ರಾವ್ ಅವರಿಗೆ ಸೇರಿದ್ದು, ಈ ಕಾರು ಪುದುಚೇರಿಯಲ್ಲಿ ನೋಂದಣಿಯಾಗಿದೆ ಎಂಬುದು ಗೊತ್ತಾಗಿದೆ. ನಂತರ ಅಪಘಾತ ಎಸಗಿದ ಮಹಿಳೆ ಮಾಧುರಿಯನ್ನು ಪೊಲೀಸರು ಬಂಧಿಸಿದ್ದರು, ಆದರೆ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಲಾಯಿತು.
ಈಪ್ರಕರಣಏನು?
ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಫುಟ್ ಪಾತ್ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹರಿದಿತ್ತು. ಇದರಿಂದಾಗಿ ಆತ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಮಾಧುರಿ ಸ್ಥಳದಿಂದ ಓಡಿಹೋಗಿದ್ದಾರೆ. ಆದರೆ ಅವರ ಸ್ನೇಹಿತರೊಬ್ಬರು ಕಾರಿನಿಂದ ಇಳಿದು ಅಪಘಾತದ ನಂತರ ಜಮಾಯಿಶಿ ನೀಡಲು ಮುಂದಾಗಿದ್ದರು. ಬಳಿಕ ಆತನೂ ಅಲ್ಲಿಂದ ಹೊರಟು ಹೋದ. ಗುಂಪಿನಲ್ಲಿದ್ದ ಕೆಲವರು ಸೂರ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಸಾವನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.