ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ನಟನೆಯ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾಯ್ತಿರ್ತಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೀರ್ ಖಾನ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರ 2022 ರಲ್ಲಿ ಬಿಡುಗಡೆಯಾಯಿತು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿಲ್ಲ. ಈ ಸಿನಿಮಾ ಫ್ಲಾಪ್ ಆಗಿತ್ತು. ಅದರ ನಂತರ, ಆಮೀರ್ ನಟನೆಯನ್ನು ಬಿಡಲು ನಿರ್ಧರಿಸಿದ್ರಂತೆ. ಇದೀಗ ಈ ದೊಡ್ಡ ನಿರ್ಧಾರದ ಹಿಂದಿನ ಕಾರಣ ರಿವೀಲ್ ಮಾಡಿದ್ದಾರೆ.
ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಅಮೀರ್ ಖಾನ್, ನಟನೆಯನ್ನು ತ್ಯಜಿಸುವ ನಿರ್ಧಾರದ ಬಗ್ಗೆ ಹೇಳಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲಿನಿಂದ ಕಂಗೆಟ್ಟು ನಟನೆಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ನಾನು ಬರಲಿಲ್ಲ ಎಂದಿದ್ದಾರೆ.
ಸಿನಿಮಾ ಕೆಲಸದ ಬಗ್ಗೆ ಮಾತಾಡಿದ ನಟ ಅಮೀರ್ ಖಾನ್, “ನಾನು 18 ವರ್ಷದವನಾಗಿದ್ದಾಗಿನಿಂದಲೂ ನನ್ನ ಗಮನವೆಲ್ಲಾ ಕೆಲಸದ ಮೇಲೆ ಇತ್ತು. ಹೀಗಾಗಿ ನಾನು ಸಂಬಂಧಗಳಿಗೆ ನನ್ನ ಸಮಯವನ್ನು ನೀಡಲು ಸಾಧ್ಯವಾಗಲಿಲ್ಲ. ಈಗ ನಾನು ಒಬ್ಬಂಟಿಯಾಗಿ ಕುಳಿತಿದ್ದೇನೆ ಎಂದಿದ್ದಾರೆ.
“ನನ್ನ ಮಕ್ಕಳು, ನನ್ನ ಒಡಹುಟ್ಟಿದವರು, ನನ್ನ ಕುಟುಂಬಕ್ಕೆ ಸಮಯ ನೀಡಲು ನನಗೆ ಸಾಧ್ಯವಾಗಲಿಲ್ಲ. ಅದು ನನ್ನ ಮಾಜಿ ಹೆಂಡತಿ ಕಿರಣ್ ಅಥವಾ ಮಾಜಿ ಪತ್ನಿ ರೀನಾ ಆಗಿರಬಹುದು, ನಾನು ಅವರಿಗೆ ಸಮಯ ನೀಡಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡೆ. ನಾನು ತಪ್ಪಿತಸ್ಥನೆಂದು ಭಾವಿಸಿದೆ. ನಾನು ಏನು ಮಾಡಲಿಲ್ಲ ಎಂದು ಅಮೀರ್ ಹೇಳಿದ್ದಾರೆ.
ನಾನು ಭಾವುಕನಾಗಿದ್ದೆ ಮತ್ತು ನಾನು ಚಿತ್ರರಂಗಕ್ಕೆ 35 ವರ್ಷಗಳನ್ನು ನೀಡಿದ್ದೇನೆ. ನಾನು ಮನೆಗೆ ಕರೆ ಮಾಡಿ ನನ್ನ ಮನೆಯವರಿಗೆ ಹೇಳಿದೆ ನಾನು ಇನ್ನು ಮುಂದೆ ಸಿನಿಮಾ ಮಾಡುವುದಿಲ್ಲ. ನಿಮ್ಮೊಂದಿಗೆ ಸಮಯ ಕಳೆಯುತ್ತೇನೆ ಎಂದು ಹೇಳಿದ್ದೆ ಎಂದು ಅಮೀರ್ ಖಾನ್ ಹೇಳಿದ್ರು.
ಸಿನಿಮಾ ಫ್ಲಾಪ್ ಆದ ಕಾರಣದಿಂದ ಈ ನಿರ್ಧಾರಕ್ಕೆ ಬಂದಿಲ್ಲ ಎಂದು ನಟ ಅಮೀರ್ ಸ್ಪಷ್ಟಪಡಿಸಿದ್ದಾರೆ. ಆದರೆ ಈ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ನನ್ನ ಮಗ ಜುನೈದ್ ಖಾನ್ ಹೇಳಿದ. ಕೆಲಸ ಮಾಡಿದ ನಂತರವೂ ನಮ್ಮೊಂದಿಗೆ ಸಮಯ ಕಳೆಯಬಹುದು ಎಂದು ಜುನೈದ್ ವಿವರಿಸಿ ತಿಳಿಸಿದ ಎಂದ್ರು. ನನ್ನ ಮಗನ ಮಾತು ಕೇಳಿದ ಅಮೀರ್ ಖಾನ್ ನಟನೆಯನ್ನು ತೊರೆಯುವ ನಿರ್ಧಾರವನ್ನು ಬದಲಿಸಿದ್ರಂತೆ.