ಚೆನ್ನೈ: 2023ರ ಐಪಿಎಲ್ (IPL 2023) ಆವೃತ್ತಿಯ ಪ್ಲೇ ಆಫ್ನಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (GT) ತಂಡವನ್ನ ಮಣಿಸಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) 10ನೇ ಬಾರಿಗೆ ಫೈನಲ್ ತಲುಪಿದೆ. ಆದ್ರೆ ಕೊನೆಯ 5 ಓವರ್ನಲ್ಲಿ ಟೈಟಾನ್ಸ್ ಗೆಲುವಿಗೆ 71 ರನ್ಗಳ ಅಗತ್ಯವಿದ್ದಾಗ ಸಿಎಸ್ಕೆ ನಾಯಕ ಎಂ.ಎಸ್ ಧೋನಿ (MS Dhoni) ನಡೆದುಕೊಂಡ ರೀತಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ದೂಷಿಸುತ್ತಿದ್ದಾರೆ.
ಈ ಹಿಂದೆ ಸಿಎಸ್ಕೆ ತಂಡದ ಪ್ರಮುಖ ಆಟಗಾರರು ಮ್ಯಾಚ್ ಫಿಕ್ಸಿಂಗ್ ಕೇಸ್ನಲ್ಲಿ ಸಿಲುಕಿದ್ದರಿಂದ ತಂಡ 2 ವರ್ಷ ಬ್ಯಾನ್ ಆಗಿತ್ತು. ಆಗ ತಂಡದಲ್ಲಿದ್ದ ಆಟಗಾರರು ಇಬ್ಭಾಗವಾಗಿ ಕೆಲ ಆಟಗಾರರು ಗುಜರಾತ್ ಲಯನ್ಸ್ ತಂಡದಲ್ಲಿ, ಇನ್ನೂ ಕೆಲವರು ಮಹಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿ ಆಡಿದ್ದರು. ಇದೀಗ ಮಹಿ ಅವರ ನಡೆಯಿಂದ ಕ್ರಿಕೆಟ್ ಅಭಿಮಾನಿಗಳ ನಡುವೆ ಪರ-ವಿರೋಧ ಚರ್ಚೆ ಹುಟ್ಟಿಕೊಂಡಿದೆ.
ಕೊನೆಯ 5 ಓವರ್ನಲ್ಲಿ ನಡೆದಿದ್ದೇನು?
ಗುಜರಾತ್ ಟೈಟಾನ್ಸ್ಗೆ ಬೃಹತ್ ಮೊತ್ತದ ಗುರಿ ನೀಡಿದ್ದ ಚೆನ್ನೈ 16ನೇ ಓವರ್ ಬೌಲ್ ಮಾಡಲು ಮಥೀಶ ಪತಿರನ ಸಿದ್ಧಗೊಳ್ಳುತ್ತಿದ್ದಾಗ ಅಂಪೈರ್ ಅನಿಲ್ ಚೌಧು ಪತಿರನ ಅವರನ್ನ ತಡೆದರು. ಆಗ ಲೆಗ್ ಅಂಪೈರ್ ಕ್ರಿಸ್ ಗ್ಯಾನಿ ಬಳಿ ತೆರಳಿದ ಧೋನಿ ಏನೆ0ದು ವಿಚಾರಿಸಿದರು. ಪತಿರನ ತಮ್ಮ ಮೊದಲ ಓವರ್ (ಇನ್ನಿಂಗ್ಸ್ನ 12ನೇ ಓವರ್) ಬೌಲ್ ಮಾಡಿದ ಬಳಿಕ 9 ನಿಮಿಷ ಮೈದಾನದಿಂದ ಹೊರಗುಳಿದಿದ್ದರು. ನಿಯಮದ ಪ್ರಕಾರ ಆಟದ ಮಧ್ಯೆ ಆಟಗಾರ ಮೈದಾನ ತೊರೆದರೆ, ಎಷ್ಟು ಸಮಯ ಹೊರಗಿದ್ದರೋ ಅಷ್ಟು ಸಮಯ ಕಳೆದ ಬಳಿಕವಷ್ಟೇ ಬೌಲ್ ಮಾಡಬಹುದು.
ಪತಿರನ ಬೌಲ್ ಮಾಡಲು ಇನ್ನೂ 4 ನಿಮಿಷ ಆಗಬೇಕಿತ್ತು. ಇದಕ್ಕೆ ಧೋನಿ ಈಗಾಗಲೇ ಚಹಾರ್, ಜಡೇಜಾ, ತೀಕ್ಷಣ ತಲಾ 4 ಓವರ್ ಮುಗಿಸಿದ್ದಾರೆ. ಉಳಿದಿರುವುದು ತುಷಾರ್ ದೇಶ್ಪಾಂಡೆ ಮಾತ್ರ. ಅದರಲ್ಲಿ 2 ಓವರ್ ಪತಿರನ ಅವರದ್ದು 3 ಓವರ್ ಬಾಕಿ ಇದೆ. ತಂಡದಲ್ಲಿರುವ ಮತ್ತೊಂದು ಬೌಲಿಂಗ್ ಆಯ್ಕೆ ಮೋಯಿನ್ ಅಲಿ, 30 ಎಸೆತದಲ್ಲಿ ಟೈಟಾನ್ಸ್ ಗೆ ಗೆಲ್ಲಲು 71 ರನ್ ಬೇಕಿದೆ. ವಿಜಯ್ ಶಂಕರ್, ರಹೀದ್ ಖಾನ್ ಇಬ್ಬರು ಬಲಗೈ ಬ್ಯಾಟರ್ಗಳು ಆಡುತ್ತಿರುವಾಗ ಬಲಗೈ ಸ್ಪಿನ್ನರ್ನನ್ನ ದಾಳಿಗಿಳಿಸುವ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ 4 ನಿಮಿಷ ಮಾತನಾಡುತ್ತಲೇ ಕಳೆಯೋಣ ಎಂದು ಧೋನಿ ಅಂಪೈರ್ಗಳಲ್ಲಿ ಮನವರಿಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ದಂಡದಿಂದ ಸಿಎಸ್ಕೆ ಪಾರು:
ಫೀಲ್ಡಿಂಗ್ ಮಾಡುತ್ತಿರುವ ತಂಡ ಉದ್ದೇಶ ಪೂರ್ವಕವಾಗಿ ಸಮಯ ವ್ಯರ್ಥ ಮಾಡಿದರೆ, ನಿಯಮದ ಪ್ರಕಾರ 5 ರನ್ ದಂಡ ಹಾಕಬೇಕು, ಜೊತೆಗೆ ಯಾವ ಬೌಲರ್ ನಿಂದಾಗಿ ಆಟ ವಿಳಂಬವಾಗುತ್ತಿದೆಯೋ ಆತನನ್ನು ಹೊರಹಾಕಬೇಕು. ಇದು ಅಂಪೈರ್ಗಳಷ್ಟೇ ತೆಗೆದುಕೊಳ್ಳಬಹುದಾದ ನಿರ್ಧಾರ. ಆದ್ರೆ ಧೋನಿಯ ವಿಚಾರದಲ್ಲಿ ಅಂಪೈರ್ ಗಳು ಮೃದು ಧೋರಣೆ ತೋರಿದ್ದಾರೆ ಎಂಬ ಚರ್ಚೆ ಜಾಲತಾಣದಲ್ಲಿ ನಡೆಯುತ್ತಿದೆ.
ಮ್ಯಾಚ್ ಫಿಕ್ಸಿಂಗ್ ಸದ್ದು:
ಐಪಿಎಲ್ನಲ್ಲಿ ಈ ಹಿಂದೆಯೂ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ಬೆಳಕಿಗೆ ಬಂದಿದೆ. ಟೀಂ ಇಂಡಿಯಾ ಮಾಜಿ ವೇಗಿ ಎಸ್ ಶ್ರೀಶಾಂತ್, ಅಂಕಿತ್ ಚವಾಣ್ ಹಾಗೂ ಅಜಿತ್ ಚಂಡೀಲಾ ಅವರು ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕಾರಿ ಗುರುನಾಥ್ ಮೇಯಪ್ಪನ್ ಅವರು ಕೂಡ ಇವರ ಜೊತೆ ಶಿಕ್ಷೆಗೆ ಒಳಗಾಗಿದ್ದರು. ಬಾಂಗ್ಲಾದೇಶ ಮಾಜಿ ನಾಯಕ ಶಕಿಬ್ ಅಲ್ ಹಸನ್ ಅವರು 2021ರಲ್ಲಿ ಭ್ರಷ್ಟಚಾರದ ಕುರಿತು ವರದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರು ಕೆಲ ತಿಂಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.
BCCI ಭ್ರಷ್ಟಾಚಾರ ನಿಗ್ರಹ ಘಟಕ ಹೇಳುವುದೇನು?
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಟಗಾರರು ಹಾಗೂ ಅಧಿಕಾರಿಗಳನ್ನ ಸಂಪರ್ಕಿಸಿದರೆ, ತಕ್ಷಣ ಅವರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಅಂತಹ ಆಟಗಾರರು ಅಮಾನತು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಕಾರ್ಯ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಭ್ರಷ್ಟಚಾರ ನಿಗ್ರಹ ಘಟಕ ಹೇಳಿದೆ.