ಬೆಂಗಳೂರು: ದಿವಂಗತ ಜಯಲಲಿತಾ ಅವರ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಪ್ತಿಯಾದ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಹೈಕೋರ್ಟ್ ಅನುಮತಿ ನೀಡಿದೆ. ಜಯಲಲಿತಾ ಅವರ ವಾರಸುದಾರೆ ಜೆ. ದೀಪಾ ಅವರು ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ನೇತೃತ್ವ ವಹಿಸಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತ್ತು.
ಇದೀಗ ವಶಪಡಿಸಿಕೊಳ್ಳಲಾಗಿದ್ದ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಫೆಬ್ರವರಿ 14 ಮತ್ತು 15 ರಂದು ಎರಡು ದಿನಗಳನ್ನು ನಿಗದಿಪಡಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಸಿಬಿಐ/ಇಡಿ ಪ್ರಕರಣಗಳ ವಿಚಾರಣೆ ನಡೆಸಲು ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಎಚ್ಎ ಬುಧವಾರ ಆದೇಶ ಹೊರಡಿಸಿದ್ದು, ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ದಿನಾಂಕಗಳನ್ನು ನಿಗದಿಪಡಿಸಿದ್ದಾರೆ.
ಜಪ್ತಿ ಮಾಡಲಾದ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿ ಮೇಲಿನ ಹಕ್ಕುಗಳನ್ನು ಕೋರಿ ಜಯಲಲಿತಾ ಅವರ ಕಾನೂನು ವಾರಸುದಾರರಾದ ಜೆ ದೀಪಕ್ ಮತ್ತು ಜೆ ದೀಪಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಹೀಗಾಗಿ ಇದೀಗ ಅವುಗಳ ಹಸ್ತಾಂತರಕ್ಕೆ ಕೋರ್ಟ್ ದಿನ ನಿಗದಿಪಡಿಸಿದೆ.