ಕಳೆದ ಕೆಲ ದಿನಗಳ ಹಿಂದೆ ವಿನೋಜ್ ರಾಜ್ ನಿರ್ಮಿಸಿದ ಲೀಲಾವತಿ ಸ್ಮಾರಕ ಉದ್ಘಾಟನೆಯಾಗಿದೆ. ಇದೀಗ ಆ ಜಾಗದಲ್ಲಿ ಸಿನಿಮಾದ ಮುಹೂರ್ತವೊಂದು ನಡೆದಿದೆ .
‘ಜನರಿಂದ ನಾನು ಮೇಲೆ ಬಂದೆ’ ಶೀರ್ಷಿಕೆ ಇರುವ ಹೊಸ ಸಿನಿಮಾಗೆ ಲೀಲಾವತಿ ಅವರ ಸ್ಮಾರಕದಲ್ಲಿ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಲೀಲಾವತಿ ಸ್ಮಾರಕದಲ್ಲಿ ಮುಹೂರ್ತ ಮಾಡಿಕೊಂಡ ಮೊದಲ ಸಿನಿಮಾ ಇದಾಗಿದ್ದು ಸಿನಿಮಾದ ಪೂಜೆ ಸಂದರ್ಭದಲ್ಲಿ ವಿನೋದ್ ರಾಜ್ ಕೂಡ ಉಪಸ್ಥಿತರಿದ್ದರು.
ಶೀರ್ಷಿಕೆಯ ಕಾರಣದಿಂದಲೇ ‘ಜನರಿಂದ ನಾನು ಮೇಲೆ ಬಂದೆ’ ಸಿನಿಮಾ ಗಮನ ಸೆಳೆಯುತ್ತಿದೆ. ಡಾ. ರಾಜ್ಕುಮಾರ್ ನಟಿಸಿದ್ದ ಕೊನೆಯ ಸಿನಿಮಾ ‘ಶಬ್ಧವೇದಿ’ಯಲ್ಲಿ ‘ಜನರಿಂದ ನಾನು ಮೇಲೆ ಬಂದೆ..’ ಹಾಡು ಸೂಪರ್ ಹಿಟ್ ಆಗಿತ್ತು. ಆ ಸಾಲನ್ನೇ ಈಗ ಶೀರ್ಷಿಕೆಯಾಗಿಸಿಕೊಂಡು ಹೊಸ ಸಿನಿಮಾ ಮಾಡಲು ಮುಂದಾಗಿದೆ ಚಿತ್ರತಂಡ. ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ವಿನೋದ್ರಾಜ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.
ಲೀಲಾವತಿ ನಾಗರಾಜ್ ಅವರು ‘ಜನರಿಂದ ನಾನು ಮೇಲೆ ಬಂದೆ’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದರು. ‘ಮಂಜುನಾಥ್ ಸಿನಿಮಾಸ್’ ಬ್ಯಾನರ್ ಮೂಲಕ ಹೇಮಾವತಿ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ನವಿಲುಗರಿ ನವೀನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಬರುತ್ತಿರುವ 4ನೇ ಸಿನಿಮಾ ಇದು. ನಾಯಕನಾಗಿ ಅವರಿಗೆ ಇದು ಎರಡನೇ ಸಿನಿಮಾ.
‘ಜನರಿಂದ ನಾನು ಮೇಲೆ ಬಂದೆ’ ಸಿನಿಮಾದಲ್ಲಿ ನವೀನ್ ಜೊತೆ ಗಂಧರ್ವ ರಾಜ್ (ಶಂಕರ್) ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಸೌಂದರ್ಯಾ ಹಾಗೂ ಕೃತಿಕಾ ದಿವಾಕರ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿನೋದ್ ರಾಜ್ ಕೂಡ ನಟಿಸುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿದೆ. ಇನ್ನುಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ.