ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು ಏಪ್ರಿಲ್ 10ಕ್ಕೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.ರಾಜ್ಯದ 1,124 ಕೇಂದ್ರಗಳಲ್ಲಿ ಮಾರ್ಚ್ 1ರಿಂದ 22ರವರೆಗೆ ನಡೆದಿದ್ದ ಪರೀಕ್ಷೆಗಳು ಸುಮಾರು 6.98 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ 98ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
2024-25ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲು ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಿ, ಫಲಿತಾಂಶ ನೀಡಬೇಕಿದೆ. ಹೀಗಾಗಿ ಸರ್ಕಾರಿ, ಅನುದಾನಿತ ಕಾಲೇಜುಗಳ 40 ಸಾವಿರಕ್ಕೂ ಹೆಚ್ಚು ಉಪನ್ಯಾಸಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು ಈಗಾಗಲೇ ಕಲಾ, ವಾಣಿಜ್ಯ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾಗಿದೆ. ಬೆಂಗಳೂರು ಕೇಂದ್ರಗಳಲ್ಲಿ ನಡೆಯುತ್ತಿರುವ ವಿಜ್ಞಾನ ವಿಷಯಗಳ ಮೌಲ್ಯಮಾಪನ ಏ.5ರ ಒಳಗೆ ಪೂರ್ಣವಾಗುವ ಸಾಧ್ಯತೆ ಇದೆ. ಹೀಗಾಗಿ ಇದೇ ಏಪ್ರಿಲ್ 10ಕ್ಕೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಸಿದ್ಧತೆ ಮಾಡಿಕೊಂಡಿದೆ.