ಅಮರಾವತಿ: ಮತದಾರರಿಗೆ ನೀಡಿದ ಚುನಾವಣಾ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದೇ ಹೋಗಿದ್ದಕ್ಕೆ ಕೌನ್ಸಿಲರ್ (Councillor) ಒಬ್ಬರು ತನಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಅನಕಪಲ್ಲಿಯಲ್ಲಿ (Anakapalli) ನಡೆದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದ ನರಸೀ ಪಟ್ಟಣ ಪುರಸಭೆಯ ಕೌನ್ಸಿಲರ್ ಮುಲಪರ್ತಿ ರಾಮರಾಜು (40) ಸ್ಥಳೀಯ ಪೌರಾಡಳಿತ ಮಂಡಳಿಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನವನ್ನು ಮಾಡಿದರೂ ಸಹ ಮತದಾರರಿಗೆ ನೀಡಿದ ಭರವಸೆಯನ್ನು ಉಳಿಸುವಲ್ಲಿ ವಿಫಲವಾಗಿದ್ದಾಗಿ ಬೇಸರ ವ್ಯಕ್ತಪಡಿಸಿ ಚಪ್ಪಲಿಯಿಂದ ತಾವೇ ಹೊಡೆದುಕೊಂಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮರಾಜು, ನಾನು ಕೌನ್ಸಿಲರ್ ಆಗಿ ಚುನಾಯಿತನಾಗಿ 31 ತಿಂಗಳಾಗಿದೆ. ಆದರೆ ನನ್ನ ವಾರ್ಡ್ನಲ್ಲಿ ಒಳಚರಂಡಿ, ವಿದ್ಯುತ್, ನೈರ್ಮಲ್ಯ, ರಸ್ತೆ ಹಾಗೂ ಇತರ ಸಮಸ್ಯೆಗಳನ್ನು ಪರಿಹರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಮತದಾರರ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ ಕಾರಣಕ್ಕೆ ಪೌರ ಸಭೆಯಲ್ಲೇ ಸಾಯುವುದು ಉತ್ತಮ ಎಂದು ನೊಂದು ನುಡಿದಿದ್ದಾರೆ. ಸ್ಥಳೀಯ ಚುನಾವಣೆ ವೇಳೆ ರಾಮರಾಜು ಅವರು ತೆಲುಗು ದೇಶಂ ಪಕ್ಷದ (TDP) ಪರವಾಗಿ ಲಿಂಗಾಪುರಂ ಗ್ರಾಮದ ಬುಡಕಟ್ಟು ಪ್ರತಿನಿಧಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.