ಅಂಬಾಲಾ: ಭೂ ವಿವಾದಕ್ಕೆ ಸಂಬಂಧಿಸಿದಂತೆ ಕುಟುಂಬದವರ ಜೊತೆ ಅಸಮಾಧಾನಗೊಂಡಿದ್ದ ನಿವೃತ್ತ ಯೋಧನೋರ್ವ ತನ್ನ ತಾಯಿ ಅಣ್ಣ ಅತ್ತಿಗೆ ಹಾಗೂ ಅವರ ಮೂವರು ಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ ಆಘಾತಕಾರಿ ಘಟನೆ ಹರ್ಯಾಣದ ಅಂಬಾಲಾದಲ್ಲಿ ನಡೆದಿದೆ. ಅಂಬಾಲದ ನರೈನ್ಗರ್ನ ರತೋರ್ ಗ್ರಾಮದ ಬಳಿ ಭಾನುವಾರ ರಾತ್ರಿ ಎಲ್ಲರೂ ನಿದ್ದೆಯಲ್ಲಿದ್ದಾಗಲೇ ಈತ ಕೃತ್ಯವೆಸಗಿದ್ದಾನೆ. ಕೊಲೆ ಮಾಡಿದ ನಂತರ ಆತ ಮನೆಯಲ್ಲೇ ಶವ ಸುಡಲು ಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ಬಳಿಕ ನಿವೃತ್ತ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಅವಘಡದಲ್ಲಿ ಒಂದೇ ಕುಟುಂಬದ ಆರು ಜನ ಸಾವಿಗೀಡಾಗಿದ್ದಾರೆ. ಅಲ್ಲದೇ ಆತ ತನ್ನ ತಂದೆಯ ಮೇಲೂ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ತಂದೆಗೂ ಗಾಯಗಳಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದ ಆದರೆ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಭೂಷಣ್ ಕುಮಾರ್ ಎಂಬಾತನೇ ಹೀಗೆ ತನ್ನ ಇಡೀ ಕುಟುಂಬದವರನ್ನು ಹತ್ಯೆ ಮಾಡಿದ ವ್ಯಕ್ತಿ. ಕೊಲೆಯಾದವರನ್ನು ಭೂಷಣ್ಕುಮಾರ್ನ ತಾಯಿ 60 ವರ್ಷದ ಸರೂಪಿ ದೇವಿ, ಸೋದರ 35 ವರ್ಷದ ಹರೀಶ್ ಕುಮಾರ್, ಅತ್ತಿಗೆ 32 ವರ್ಷದ ಸೋನಿಯಾ, ಮಕ್ಕಳಾದ 7 ವರ್ಷದ ಪರಿ, 5 ವರ್ಷದ ಯಶಿಕಾ ಹಾಗೂ ಆರು ತಿಂಗಳ ಮಗು ಮಯಾಂಕ್ ಎಂದು ಗುರುತಿಸಲಾಗಿದೆ.