ವಾಷಿಂಗ್ಟನ್: ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ವಿಶ್ವದ ಎರಡನೇ ರಾಷ್ಟ್ರ ಭಾರತವಾಗಿದ್ದು, ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನದಲ್ಲಿ ವಾಸಿಸುತ್ತಿರುವವರಿಗಿಂತಲೂ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಮೆರಿಕದ ಪೀಟರ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಎಕನಾಮಿಕ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತದಲ್ಲಿ ಮುಸ್ಲಿಮರ ಬದುಕು ಸಂಕಷ್ಟದಲ್ಲಿದೆ ಅಥವಾ ಸರ್ಕಾರಗಳೇ ಅವರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹಲವು ಬರಹಗಳು ಸೂಚಿಸುತ್ತವೆ. ಅಂಥದ್ದೊಂದು ಗ್ರಹಿಕೆ ಇದ್ದಿದ್ದರೆ ಅಥವಾ ಅದು ನಿಜವೇ ಆಗಿದ್ದಿದ್ದರೆ 1947ರ ನಂತರದ ಕಾಲಘಟ್ಟದಲ್ಲಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನೆ ಮಾಡಿದ್ದಾರೆ.
‘ಪಾಕಿಸ್ತಾನ ಸ್ವತಃ ‘ಮುಸ್ಲಿಂ ರಾಷ್ಟ್ರ’ ಎಂದು ಘೋಷಿಸಿಕೊಂಡಿದೆ ಮತ್ತು ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ ಎಂದು ಪ್ರತಿಜ್ಞೆ ಮಾಡಿದೆ. ಇದು ಸತ್ಯಕ್ಕಿಂತ ತುಂಬಾ ದೂರವಾದ ಮಾತು. ಮುಹಾಜಿರ್ಗಳು, ಶಿಯಾ ಮತ್ತು ಮುಖ್ಯವಾಹಿನಿಯಲ್ಲಿ ಇಲ್ಲದ ಪ್ರತಿಯೊಂದು ವರ್ಗದ ಮೇಲೂ ಹಿಂಸಾಚಾರ ನಡೆಯುತ್ತಿವೆ. ಭಾರತದಲ್ಲಿ ಮುಸ್ಲಿಮರು ವ್ಯಾಪಾರ ಮಾಡಿಕೊಂಡಿದ್ದಾರೆ. ಅವರ ಮಕ್ಕಳು ಶಿಕ್ಷಣ ಪಡೆಯುತ್ತಿರುವುದನ್ನು ನೀವು ಕಾಣಬಹುದು. ಸರ್ಕಾರದ ವತಿಯಿಂದ ಅವರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಯುಎಸ್ ವಿದೇಶಾಂಗ ಇಲಾಖೆಯು, ಅಕ್ರಮ, ಹತ್ಯೆ, ಪತ್ರಿಕಾ ಸ್ವಾತಂತ್ರ್ಯ ಕುಸಿತ, ಧಾರ್ಮಿಕ ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿದ ಗಲಭೆ ಸೇರಿದಂತೆ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಬಗ್ಗೆ ಮಾರ್ಚ್ನಲ್ಲಿ ವರದಿ ಬಿಡುಗಡೆ ಮಾಡಿತ್ತು.
ಈ ರೀತಿಯ ವರದಿಗಳಿಂದ ಭಾರತದಲ್ಲಿ ಹೂಡಿಕೆ ಮತ್ತು ಬಂಡವಾಳ ಹರಿವಿನ ಮೇಲೆ ಪರಿಣಾಮ ಉಂಟಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ಮಲಾ, ‘ನನಗನಿಸುತ್ತದೆ, ಹೂಡಿಕೆದಾರರೇ ಇದಕ್ಕೆ ಉತ್ತರ ನೀಡಬೇಕು. ಬಂಡವಾಳ ಸ್ವೀಕರಿಸುವವರಾಗಿ ನಾವು, ಭಾರತಕ್ಕೆ ಬನ್ನಿ ಎನ್ನುತ್ತೇವೆ. ಇಂತಹ ವರದಿಗಳನ್ನು ಸಿದ್ಧಪಡಿಸಿದವರು ಕನಿಷ್ಠ ತಳಮಟ್ಟಕ್ಕೆ ಇಳಿದು ವಾಸ್ತವವನ್ನು ನೋಡಿರುವುದಿಲ್ಲ’ ಎಂದು ಟೀಕಿಸಿದರು.