ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರ (Karkala Vidhanasabha Contituency) ದಲ್ಲಿ ಬಿಜೆಪಿ (BJP) ಹಾಗೂ ಮುತಾಲಿಕ್ ನಡುವೆ ಮುಟ್ಟಾಳ ವಾರ್ ಶುರುವಾಗಿದೆ. ಚುನಾವಣೆ ಘೋಷಣೆಗೆ ಮುನ್ನ ಆರೋಪಗಳ ಸುರಿಮಳೆ ಮಾಡುತ್ತಿದ್ದ ಮುತಾಲಿಕ್ಗೆ ಬಿಜೆಪಿ ಉತ್ತರ ಕೊಟ್ಟಿರಲಿಲ್ಲ. ಇದೀಗ ಸುನಿಲ್ ಕುಮಾರ್ (Sunil Kumar) ಗೆ ಮತ ಹಾಕಿ ಮುಟ್ಟಾಳ ರಾಗಬೇಡಿ ಎಂಬ ಮುತಾಲಿಕ್ (Pramod Muthalik) ಪೋಸ್ಟರ್ ವಿರುದ್ಧ ಕಮಲ ಪಡೆ ತಿರುಗಿಬಿದ್ದಿದೆ.
ಹೌದು. ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ರಾಜಕೀಯ ಪಕ್ಷಗಳ ನಾಯಕರ ಟಾಕ್ಫೈಟ್ ಜೋರಾಗಿದೆ. ಈ ಮಧ್ಯೆ ಕಾರ್ಕಳ ಅಖಾಡದಲ್ಲಿ ಪೋಸ್ಟರ್ ವಾರ್ ತಾರಕಕ್ಕೇರಿದೆ. ಕಾರ್ಕಳದಲ್ಲೀಗ ಪ್ರಮೋದ್ ಮುತಾಲಿಕ್ ಹಾಗೂ ಸಚಿವ ಸುನೀಲ್ ಕುಮಾರ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಾರ್ಕಳದ ಜನತೆ ಮತ್ತೊಮ್ಮೆ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸಿದ್ರೆ ನಿಮ್ಮಷ್ಟು ಮುಟ್ಟಾಳರು ಮತ್ತೊಬ್ಬರಿಲ್ಲ. ನೀವು ಮತ್ತೆ ಮುಟ್ಟಾಳರಾಗುವಿರಾ. ಹೀಗಂತಾ ಪ್ರಮೋದ್ ಮುತಾಲಿಕ್ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ಹಾಕುತ್ತಿದ್ದಂತೆ ಕಾರ್ಕಳದ ಬಿಜೆಪಿ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದಾರೆ. ನೂರಾರು ಜನ ಮುತಾಲಿಕ್ ಪೋಸ್ಟರ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಕಳ ಮತದಾರರಿಗೆ ಅವಮಾನವಾಯ್ತು. ಇದರ ಫಲ ನೀವು ಫಲಿತಾಂಶದ ದಿನ ಅನುಭವಿಸ್ತೀರಿ. ಯಾರದ್ದೊ ಕುಮ್ಮಕ್ಕಿನಿಂದ ಯಾರದ್ದೋ ದುಡ್ಡು ತೆಗೆದುಕೊಂಡು ಎಲ್ಲಿಂದಲೋ ಕಾರ್ಕಳಕ್ಕೆ ಬಂದಿದ್ದೀರಿ. ಈ ಬಾರಿ ಕಾರ್ಕಳದಲ್ಲಿ ನಿಮಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಈ ಪೋಸ್ಟರ್ ಶ್ರೀರಾಮ ಸೇನೆ- ಮುತಾಲಿಕ್ ಅಭಿಮಾನಿ ಬಳಗ- ಬಿಜೆಪಿ ಕಾರ್ಯಕರ್ತರು- ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ನಡುವೆ ಜಗಳಕ್ಕೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಮೋದ್ ಮುತಾಲಿಕ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕರು ಮುತಾಲಿಕ್ಗೆ ಸವಾಲ್ ಹಾಕಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಾಕ್ವಾರ್ ಮತ್ತಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಪೋಸ್ಟರ್ ಕುರಿತು ಪ್ರಮೋದ್ ಮುತಾಲಿಕ್ ಈವರೆಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.