ಚೀನಾದ ಆತಿಥ್ಯದಲ್ಲಿ ನಡೆಯಲಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ನಲ್ಲಿ ಟೀಮ್ ಇಂಡಿಯಾವನ್ನು ಸಿಎಸ್ಕೆಯ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಮುನ್ನಡೆಸುತ್ತಿದ್ದು, ಮಹಾ ಕ್ರೀಡಾಕೂಟದಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದು ಕೊಡುವುದೇ ನನ್ನ ಮಹತ್ತರ ಕನಸಾಗಿದೆ ಎಂದು ತಮ್ಮ ಹೆಬ್ಬಯಕೆ ವ್ಯಕ್ತಪಡಿಸಿದ್ದಾರೆ.
ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ಪಡೆ 5ನೇ ಬಾರಿ ಟ್ರೋಫಿ ಗೆಲ್ಲಲು ನೆರವಾಗಿದ್ದ ಋತುರಾಜ್ ಗಾಯಕ್ವಾಡ್ 590 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಅನುಭವಿ ಆಟಗಾರರಿಗೆ ಏಷ್ಯನ್ ಗೇಮ್ಸ್ ನಿಂದ ವಿಶ್ರಾಂತಿ ನೀಡಿದ್ದು, ರೋಹಿತ್ ಶರ್ಮಾ ಬದಲಿಗೆ ಋತುರಾಜ್ ಗಾಯಕ್ವಾಡ್ಗೆ ನಾಯಕನ ಜವಾಬ್ದಾರಿಯನ್ನು ಬಿಸಿಸಿಐ ಸೆಲೆಕ್ಟರ್ಸ್ ವಹಿಸಿದ್ದಾರೆ.
ಚೀನಾದ ಹಾಂಗ್ಝೌನಲ್ಲಿ ಸೆಪ್ಟಂಬರ್ 28 ರಿಂದ ಅಕ್ಟೋಬರ್ 8ರವರೆಗೆ ನಡೆಯಲಿರುವ ಏಷ್ಯಾ ಕ್ರೀಡಾಕೂಟದ ಬಗ್ಗೆ ಬಿಸಿಸಿಐ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಋತುರಾಜ್ ಗಾಯಕ್ವಾಡ್ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.
ಚಿನ್ನದ ಪದಕ ಗೆಲ್ಲುವುದೇ ಗುರಿ
“ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವುದು ನನ್ನ ಕನಸಾಗಿದೆ. ಇಂತಹ ಮಹಾ ಕ್ರೀಡಾಕೂಟದ ವೇದಿಕೆ ಮೇಲೆ ನಿಂತು ರಾಷ್ಟ್ರಗೀತೆ ಆಡುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಂತಹ ಸದಾವಕಾಶ ಕಲ್ಪಿಸಿಕೊಟ್ಟ ಬಿಸಿಸಿಐ ಮ್ಯಾನೇಜ್ ಮೆಂಟ್ ಹಾಗೂ ಸೆಲೆಕ್ಟರ್ಸ್ ಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಮಹಾ ಟೂರ್ನಿಯಲ್ಲಿ ನಾಯಕತ್ವ ವಹಿಸಿರುವುದು ನಿಜಕ್ಕೂ ಗೌರವದ ಸಂಗತಿಯಾಗಿದ್ದು, ನನ್ನೊಂದಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶವಾಗಿದೆ,” ಎಂದು ಋತುರಾಜ್ ಗಾಯಕ್ವಾಡ್ ಸಂತಸ ವ್ಯಕ್ತಪಡಿಸಿದ್ದಾರೆ.