ಕಳೆದ ಮೂರು ನಾಲ್ಕು ದಿನಗಳ ಹಿಂದೆ ನಟಿ ರವೀನಾ ಟಂಡನ್ ಕಾರು ಅಪಘಾತಕ್ಕೆ ಈಡಾಗಿತ್ತು. ರವೀನಾ ಟಂಡನ್ ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಮೂವರಿಗೆ ಗಾಯಗೊಳಿಸಿದ್ದ ಎನ್ನಲಾಗಿತ್ತು. ಅಲ್ಲದೆ ನಟಿ ರವೀನಾ ಕೂಡ ಕುಡಿದಿದ್ದು ಈ ವೇಳೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು. ಈ ಬಗ್ಗೆ ನಟಿ ರವಿನಾ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.
ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದ. ಇದರಿಂದ ಅವರ ತಲೆ ಮತ್ತು ಮೂಗಿಗೆ ಗಾಯಗಳಾಗಿದ್ದವು. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳಿಯರು ಕಾರು ಚಾಲಕನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದರು. ಕಾರು ಚಾಲಕನ್ನು ಪಾರು ಮಾಡಲು ಬಂದ ನಟಿ, ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿದ್ದಾರೆ ಎನ್ನಲಾಗಿತ್ತು.
ಘಟನೆ ನಡೆದು ನಾಲ್ಕು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ ರವೀನಾ ಟಂಡನ್. ನನ್ನ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ. ನಾನು ಕುಡಿದಿರಲಿಲ್ಲ. ನನ್ನ ಡ್ರೈವರ್ ನೆರವಿಗೆ ಧಾವಿಸಿದೆ. ಈ ಸಂದರ್ಭದಲ್ಲಿ ಅವರೇ ನನ್ನನ್ನು ಹೊಡೆಯೋಕೆ ಬಂದರು. ಇದರಲ್ಲಿ ನನ್ನದು ಮತ್ತು ನನ್ನ ಡ್ರೈವರ್ ದ್ದು ತಪ್ಪಿಲ್ಲ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಅಪಘಾತದಿಂದ ಮಹಿಳೆಗೆ ರಕ್ತಸ್ರಾವವಾಗಿದೆ ಎಂಬುದು ತಿಳಿದಿದೆ. ಈ ವಿಚಾರ ದೊಡ್ಡದಾಗುತ್ತಿದ್ದಂತೆ ವಿಡಿಯೋಗಳನ್ನು ರೆಕಾರ್ಡ್ ಮಾಡಬೇಡಿ ಎಂದು ರವೀನಾ ನೆರದವರಲ್ಲಿ ವಿನಂತಿಸಿದ್ದರು. ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ ಎಂದು ರವೀನಾ ಕೇಳಿಕೊಂಡಿದ್ದರು. ಚಾಲಕನ ರಕ್ಷಣೆಗೆ ಬಂದ ರವೀನಾ ಟಂಡನ್ ಮೇಲೆ ಮಹಿಳೆಯೊಬ್ಬರು ಹಲ್ಲೆಗೆ ಪ್ರಯತ್ನಿಸಿದ್ದರು ಎನ್ನಲಾಗಿತ್ತು. ಈ ಬಗ್ಗೆ ಡಿಸಿಪಿ ರಾಜ್ ತಿಲಕ್ ರೋಷನ್ ಪ್ರತಿಕ್ರಿಯೆ ಕೂಡ ನೀಡಿದ್ದರು.
ರವಿನಾ ಟಂಡನ್ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ ಮತ್ತು ರವೀನಾ ಅಂದು ಕುಡಿದಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅಸಲಿ ವಿಚಾರ ಹೊರಬಿದ್ದಿದೆ ಎಂದು ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ.