ನವದೆಹಲಿ: ನನ್ನ ಪತಿ ಯಾವುದೇ ತಪ್ಪು ಮಾಡಿರಲು ಸಾಧ್ಯವಿಲ್ಲ ಎಂದು ಜಮ್ಮು-ಕಾಶ್ಮೀರದಲ್ಲಿ (Jammu and Kashmir) ಪ್ರಧಾನಿ ಕಚೇರಿಯ ಉನ್ನತ ಅಧಿಕಾರಿಯ ಸೋಗಿನಲ್ಲಿ ಝೆಡ್ ಪ್ಲಸ್ ಭದ್ರತೆ ಪಡೆದು ಬಂಧಿತನಾದ ಕಿರಣ್ ಪಟೇಲ್ ಅವರ ಪತ್ನಿ ಮಾಲಿನಿ ಪಟೇಲ್ ಹೇಳಿದ್ದಾರೆ.
ನನ್ನ ಪತಿ ಎಂಜಿನಿಯರ್ (Engineer)ಆಗಿದ್ದು ಕೆಲಸದ ಸಲುವಾಗಿ ಕಾಶ್ಮೀರಕ್ಕೆ ತೆರಳಿದ್ದರು. ಅವರು ತಪ್ಪು ಮಾಡುವ ಸ್ವಭಾವದವರಲ್ಲ. ಪ್ರಕರಣವನ್ನು ಆಪ್ತ ವಕೀಲರು (Advocate) ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಬಂಧಿತ ಕಿರಣ್ ಪಟೇಲ್ ಗುಜರಾತ್ನ (Gujarat) ಘೋಡಸರ್ ನ ನಿವಾಸಿಯಾಗಿದ್ದು, ಆತನ ವಿರುದ್ಧ ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಕೂಡ ತನಿಖೆ ಆರಂಭಿಸಿದೆ. ಕ್ರಿಮಿನಲ್ ಹಿನ್ನೆಲೆ ಹಾಗೂ ಆತನ ಸಂಪರ್ಕದಲ್ಲಿರುವವರ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಗಳ ಪ್ರಕಾರ, ಆರೋಪಿ ಕಾಶ್ಮೀರಕ್ಕೆ ಮೂರನೇ ಬಾರಿ ಭೇಟಿ ನೀಡಿದ್ದ. ಸೇಬಿನ ತೋಟಗಳಿಗೆ ಖರೀದಿದಾರನ್ನು ಗುರುತಿಸಲು ಸರ್ಕಾರ ಕಳುಹಿಸಿರುವುದಾಗಿ ಹೇಳಿಕೊಂಡಿದ್ದ. ಉನ್ನತ ಅಧಿಕಾರಿ ಎಂದು ಹೇಳಿಕೊಂಡು ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ. ಆರೋಪಿಯ ವಿರುದ್ಧ ವಂಚನೆ ಹಾಗೂ ಫೋರ್ಜರಿ ಸಂಬಂಧಿತ ಕೇಸ್ ದಾಖಲಿಸಿ, ಮಾ. 3ರಂದು ಬಂಧಿಸಲಾಗಿತ್ತು. ಆತನ ಬಳಿ ಇದ್ದ ನಕಲಿ ಗುರುತಿನ ಚೀಟಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.