ಚೆನ್ನೈ: ನನ್ನ ತಾಯಿಯನ್ನು ನೋಡದೆ 32 ವರ್ಷಗಳು ಕಳೆದಿವೆ. ನನ್ನ ತಂದೆಯ ಕೊನೆಯ ದಿನಗಳಲ್ಲಿ ಅವರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಅದು ನನ್ನನ್ನು ತುಂಬಾ ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹಂತಕರಲ್ಲಿ ಒಬ್ಬನಾದ ಶ್ರೀಲಂಕಾದ (Sri Lanka) ಟಿ.ಸುಥೆಂತಿರರಾಜ ತಮಿಳುನಾಡಿನ (Tamil Nadu) ಕಾರಾಗೃಹದ ವಿಶೇಷ ಶಿಬಿರದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.
ಸೂರ್ಯನ ಬೆಳಕು (Sunlight) ಕೂಡ ನಮ್ಮ ದೇಹವನ್ನು ಸ್ಪರ್ಶಿಸುವುದಿಲ್ಲ. ನಮ್ಮ ತಾಯ್ನಾಡಿಗೆ ಮರಳಲು ಬೆಂಬಲವಾಗಿ ಪ್ರಪಂಚದಾದ್ಯಂತದ ಇರುವ ತಮಿಳಿಯನ್ನರು ಧ್ವನಿ ಎತ್ತಬೇಕು ಎಂದು ಬರೆದುಕೊಂಡಿದ್ದಾನೆ. ಅಲ್ಲದೇ ವಾಪಸ್ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವರಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಗುರುತಿನ ಪುರಾವೆಯನ್ನು ನವೀಕರಿಸಲು ಚೆನ್ನೈನಲ್ಲಿರುವ ಶ್ರೀಲಂಕಾ ಡೆಪ್ಯುಟಿ ಹೈಕಮಿಷನ್ ಕಚೇರಿಗೆ ಪ್ರವೇಶ ನೀಡುವಂತೆ ಆತ ಮನವಿ ಮಾಡಿದ್ದಾನೆ.
ಸುಪ್ರೀಂನಿಂದ ಬಿಡುಗಡೆಯಾದರೂ, ಕಳೆದ ಆರು ತಿಂಗಳಿನಿಂದ ತಿರುಚ್ಚಿ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ವಿಶೇಷ ಶಿಬಿರದಲ್ಲಿ (Trichy Central Prison campus) ನನ್ನನ್ನು ಇರಿಸಲಾಗಿದೆ. ವಿಶೇಷ ಶಿಬಿರದಲ್ಲಿ 120 ಕ್ಕೂ ಹೆಚ್ಚು ವಿದೇಶಿಯರು ವಾಸಿಸುತ್ತಿದ್ದಾರೆ. ಅವರಲ್ಲಿ ಸುಮಾರು 90 ಮಂದಿ ಶ್ರೀಲಂಕಾದಿಂದ ಬಂದವರು. ಇಲ್ಲಿ ತಮಿಳರು, ಶ್ರೀಲಂಕಾದವರು, ಮುಸ್ಲಿಮರು ಎಂಬ ಭೇದವಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸಂಬಂಧಿಕರು ಮಾತ್ರ ಶಿಬಿರದಲ್ಲಿದ್ದವರನ್ನು ಭೇಟಿಯಾಗಬಹುದು. ಭಾರತದಲ್ಲಿ ನನ್ನ ಸಂಬಂಧಿ ಯಾರಿದ್ದಾರೆ? ನಮಗೆ ಫೋನ್ನಲ್ಲಿ ಮಾತಾಡಲು ಅವಕಾಶವಿಲ್ಲ. ನನ್ನ ಮನವಿ ತಪ್ಪಾಗಿದ್ದರೆ ನನ್ನನ್ನು ಯಾರೂ ಬೆಂಬಲಿಸುವ ಅಗತ್ಯವಿಲ್ಲ ಎಂದು ಬರೆದಿದ್ದಾನೆ.
ಶ್ರೀಲಂಕಾದ ಪ್ರಜೆಯಾಗಿರುವ ಸಂತನ್ ಅಲಿಯಾಸ್ ಟಿ.ಸುಥೆಂತಿರರಾಜ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ 7 ಅಪರಾಧಿಗಳಲ್ಲಿ ಒಬ್ಬನಾಗಿದ್ದಾನೆ. ಆತನನ್ನು ಸುಪ್ರೀಂ ಕೋರ್ಟ್ ಆದೇಶದಂತೆ 2022ರ ನ.11 ರಂದು ಮುರುಗನ್, ರಾಬರ್ಟ್ ಪಯಸ್ ಮತ್ತು ಜಯಕುಮಾರ್ ಜೊತೆಯಲ್ಲಿ ತಿರುಚ್ಚಿ ಕೇಂದ್ರ ಕಾರಾಗೃಹದ ಕ್ಯಾಂಪಸ್ನಲ್ಲಿರುವ ವಿಶೇಷ ಶಿಬಿರದಲ್ಲಿ ಇರಿಸಲಾಗಿದೆ