ಬೆಂಗಳೂರು: ಮೋದಿಗೆ ಮಾಂಗಲ್ಯ ಬೆಲೆ ಗೊತ್ತಿಲ್ಲ. ನನ್ನ ತಾಯಿ ಮಾಂಗಲ್ಯವು ಈ ದೇಶಕ್ಕಾಗಿ ಅರ್ಪಣೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. ಮಂಗಳಸೂತ್ರದ ಮಹತ್ವವನ್ನು ಪ್ರಧಾನಿ ಅರ್ಥ ಮಾಡಿಕೊಂಡಿದ್ದರೆ ಇಂತಹ ಮಾತುಗಳನ್ನು ಹೇಳುತ್ತಿರಲಿಲ್ಲ.
ಕಳೆದ 55 ವರ್ಷಗಳಲ್ಲಿ ಯಾರದ್ದಾದರೂ ಮಾಂಗಲ್ಯ ಅಥವಾ ಚಿನ್ನವನ್ನು ಕಾಂಗ್ರೆಸ್ ಕಿತ್ತುಕೊಂಡಿದೆಯೇ? ದೇಶವು ಯುದ್ಧದಲ್ಲಿ ಹೋರಾಡುತ್ತಿದ್ದಾಗ ನಮ್ಮ ಅಜ್ಜಿ ಇಂದಿರಾ ಗಾಂಧಿ ಅವರು ತಮ್ಮ ಮಂಗಳಸೂತ್ರ ಮತ್ತು ಆಭರಣಗಳನ್ನು ಮಾರಾಟ ಮಾಡಿ ತ್ಯಾಗ ಮಾಡಿದ್ದರು. ನನ್ನ ತಾಯಿಯ ಮಂಗಳಸೂತ್ರವನ್ನು ಈ ದೇಶಕ್ಕಾಗಿ ತ್ಯಾಗ ಮಾಡಲಾಗಿದೆ ಎಂದು ವಿವರಿಸಿದರು.
ನೋಟು ಅಮಾನ್ಯೀಕರಣ ಮಾಡಿದ ಸಂದರ್ಭದಲ್ಲಿ ಎಷ್ಟೋ ನನ್ನ ಸಹೋದರಿಯರು ತಮ್ಮ ಮಂಗಳಸೂತ್ರಗಳನ್ನು ಅಡಮಾನವಿಟ್ಟಿದ್ದರು. ಆಗ ಪ್ರಧಾನಿ ಮೋದಿ ಎಲ್ಲಿದ್ದರು? ಸಾಲದ ಸುಳಿಯಲ್ಲಿ ಸಿಲುಕಿರುವ ರೈತನ ಪತ್ನಿ ಮಂಗಳಸೂತ್ರವನ್ನು ಮಾರಬೇಕಾದಾಗ ಪ್ರಧಾನಿ ಎಲ್ಲಿದ್ದರು? ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಮಣಿಪುರದ ಮಹಿಳೆಯ ಬಗ್ಗೆ ಪ್ರಧಾನಿ ಏಕೆ ಏನನ್ನೂ ಹೇಳಲಿಲ್ಲ? ಇಂದು ಹಣದುಬ್ಬರದಿಂದ ಎಷ್ಟು ಜನರ ಮಂಗಳಸೂತ್ರಗಳನ್ನು ಅಡಮಾನವಿಟ್ಟಿದ್ದಾರೆ? ಎಂದು ಪ್ರಿಯಾಂಕಾ ಮೋದಿಯವರು ಪ್ರಶ್ನಿಸಿದ್ದಾರೆ.
ನಮ್ಮ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಮಾಸಿಕ 1 ಲಕ್ಷ ರೂ.ಗಳನ್ನು ನೀಡುವ ಮೂಲಕ ಸಬಲೀಕರಣದ ಬಗ್ಗೆ ಇದೆ. ವಿದ್ಯಾರ್ಥಿಗಳ ಸಾಲವನ್ನು ಮನ್ನಾ ಮಾಡುವ ಬಗ್ಗೆ ಇದೆ. ರೈತರ ಸಾಲ ಮನ್ನಾ ಮತ್ತು ಎಂಎಸ್ಪಿ ಖಾತರಿ ಬಗ್ಗೆಇದೆ. 30 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಉಲ್ಲೇಖವಿದೆ. ಆದರೆ, ಈ ವಿಷಯಗಳ ಬಗ್ಗೆ ಮೋದಿ ಅವರು ಮೌನವಾಗಿದ್ದಾರೆ ಎಂದು ಕಿಡಿಕಾರಿದರು.