ಬೆಂಗಳೂರು: ಮೈಸೂರು-ಕುಶಾಲನಗರ 4 ಪಥದ ಹೊಸ ಹೆದ್ದಾರಿ ಕಾಮಗಾರಿಯನ್ನು 2025 ರೊಳಗೆ ಮುಗಿಸುವುದು ನನ್ನ ಮುಂದಿನ ಗುರಿ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಬೆಂಗಳೂರು – ಮೈಸೂರು ದಶಪಥ ಲೋಕಾರ್ಪಣೆ ಬೆನ್ನಲ್ಲೇ ಈ ಹೇಳಿಕೆಯನ್ನು ನೀಡಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಚಾರವನ್ನು ಹಂಚಿಕೊಂಡಿರುವ ಅವರು, ನನ್ನ ಮುಂದಿನ ಗುರಿ ಮೋದೀಜಿ ಭೂಮಿ ಪೂಜೆ ಮಾಡಿದ ಮೈಸೂರು-ಕುಶಾಲನಗರ 4 ಪಥದ ಹೊಸ ಹೆದ್ದಾರಿ ಕಾಮಗಾರಿಯನ್ನು 2025 ರೊಳಗೆ ಮುಗಿಸುವುದು ಮತ್ತು ಮೈಸೂರು-ನಂಜನಗೂಡು ನಡುವಿನ ರಸ್ತೆಯನ್ನು 6 ಪಥಕ್ಕೆ ಹೆಚ್ಚಿಸುವುದಾಗಿದೆ. ನಿಮ್ಮ ಆಶೀರ್ವಾದವಿರಲಿ ಎಂದು ಕೋರಿದ್ದಾರೆ.
ಈ ಕುರಿತಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಸಂದರ್ಭದಲ್ಲಿ ಮೈಸೂರು- ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. 4,128.92 ಕೋಟಿ ರೂ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹೆದ್ದಾರಿ ಆರಂಭವಾದಲ್ಲಿ ಬೆಂಗಳೂರಿನಿಂದ ಕುಶಾಲನಗರಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಚತುಷ್ಪದ ಹೆದ್ದಾರಿ ನಿರ್ಮಾಣವಾದಲ್ಲಿ ಪ್ರಯಾಣ ಸಮಯವೂ ಇಳಿಕೆಯಾಗಲಿದೆ. ಇನ್ನು ಎರಡನೇಯ ಹಂತದಲ್ಲಿ ಕುಶಾಲನಗರ ಮತ್ತು ಸಂಪಾಜೆ ಹಾಗೂ ಮೂರನೇ ಹಂತದಲ್ಲಿ ಸಂಪಾಜೆಯಿಂದ ಮಾಣಿಗೆ ಹೆದ್ದಾರಿ ನಿರ್ಮಾಣ ಮಾಡುವುದು ಯೋಜನೆಯ ಗುರಿಯಾಗಿದೆ.
ಇನ್ನು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕಡೆಯಿಂದ ತಮಿಳುನಾಡು ಮತ್ತು ಊಟಿ ಕಡೆಯಿಂದ ಬಸ್, ಸರಕು ಸಾಗಣೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರು-ನಂಜನಗೂಡು ನಡುವಿನ ರಿಂಗ್ ರಸ್ತೆ ಜಂಕ್ಷನ್ ಮುಖಾಂತರ ಕರ್ನಾಟಕದ ಬೇರೆ ಭಾಗಗಳಿಗೆ ತೆರಳುತ್ತವೆ.
ಮೈಸೂರು-ನಂಜನಗೂಡು ರಸ್ತೆಯಲ್ಲಿಜಂಕ್ಷನ್ನ ಬಳಿಯಲ್ಲಿ ಸರ್ವಿಸ್ ರಸ್ತೆಗಳಿಲ್ಲ ಎಂಬ ಬಗ್ಗೆಯೂ ಸಾರ್ವಜನಿಕರು ಆಕ್ಷೇಪ ಎತ್ತಿದ್ದಾರೆ. ಇದರಿಂದ ಜಂಕ್ಷನ್ನ ಎರಡೂ ಕಡೆಗಳಲ್ಲಿಯೂ ಸ್ಥಳೀಯ ಹಾಗೂ ಹೆದ್ದಾರಿ ಟ್ರಾಫಿಕ್ ಸಂದಿಸುವಲ್ಲಿ ಸಂಚಾರ ದುಸ್ತರವಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ಪ್ರತಾಪ್ ಸಿಂಹ ಅವರ ಪೋಸ್ಟ್ಗೆ ಕಾಮೆಂಟ್ ಹಾಕಿರುವ ನೆಟ್ಟಿಗರೊಬ್ಬರೂ ಈ ಸಮಸ್ಯೆಯನ್ನು ಉಲ್ಲೇಖಿಸಿದ್ದಾರೆ. ನಂಜನಗೂಡಿಗೆ ಸರ್ವೀಸ್ ರಸ್ತೆ ಇಲ್ಲದಿರುವುದೊಂದು ಕೊರತೆ ಆಗಿದೆ. ಮುಂದಿನ ಯೋಜನೆಯಲ್ಲಿ ಸ್ಥಳೀಯರಿಗೆ ಅನುಕೂಲವಾಗುವಂತೆ ಮೈಸೂರು – ಬೆಂಗಳೂರು ಮಾದರಿಯಲ್ಲಿ ಸರ್ವೀಸ್ ರೋಡ್ ಇದ್ದರೆ ಬಹಳ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.