ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸುವ ಕೆಲಸ ನಿರಂತರವಾಗಿ ನಡೀತಾ ಇದೆ. ಸಿದ್ದರಾಮಯ್ಯ ಅವರು ಹಿಟ್ಲರ್ ಆಗಿದ್ದಾರೆ. ಸರ್ಕಾರ ನನ್ನ ವಿರುದ್ಧವೂ ಎಫ್ಐಆರ್ ದಾಖಲಿಸಿದೆ. ನಾವು ಹೋರಾಟ ಮಾಡಿಕೊಂಡು ಬಂದವರು, ಹೋರಾಟ ಮುಂದುವರಿಸ್ತೀವಿ ಎಂದು ನಾಗಮಂಗಲ ಗಲಭೆ ವಿಚಾರವಾಗಿ ಎಫ್ಐಆರ್ ದಾಖಲಿಸಿರುವ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ಗಲಭೆ ವಿಚಾರವಾಗಿ ನನ್ನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಸರ್ಕಾರ ದ್ವೇಷದ ರಾಜಕೀಯ ಮಾಡುವುದು ಬೇಡ, ಎಫ್ಐಆರ್ ಹಾಕಿದೆ, ನಾವು ಎದುರಿಸ್ತೇವೆ. ಪೊಲೀಸರು ನಮ್ಮನ್ನು ಬಂಧಿಸಬಹುದು, ನಾವು ಬಂಧನಕ್ಕೆ ಒಳಗಾಗ್ತೇವೆ. ನಾವು ಹೋರಾಟ ಮಾಡಿಕೊಂಡು ಬಂದವರು, ಹೋರಾಟ ಮುಂದುವರಿಸ್ತೀವಿ ಎಂದಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸುವ ಕೆಲಸ ನಿರಂತರವಾಗಿ ನಡೀತಾ ಇದೆ. ಸಿದ್ದರಾಮಯ್ಯ ಅವರು ಹಿಟ್ಲರ್ ಆಗಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರ ಧ್ವನಿ ಅಡಗಿಸುವ, ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಐವಾನ್ ಡಿಸೋಜಾ ಅವರು ಬಾಂಗ್ಲಾ ಮಾದರಿಯ ಗಲಭೆ ಆಗುತ್ತದೆ ಎಂದಿದ್ದರು. ನಮ್ಮ ಕಾರ್ಯಕರ್ತರು ನಿತ್ಯ ಠಾಣೆಗೆ ಹೋಗ್ತಿದ್ರೂ ಐವಾನ್ ಡಿಸೋಜಾ ವಿರುದ್ಧ ದೂರು ತೆಗೆದುಕೊಳ್ಳಲಿಲ್ಲ. ಎಫ್ಐಆರ್ ದಾಖಲು ಮಾಡಿಕೊಳ್ಳಲಿಲ್ಲ. ನಾಗೇಂದ್ರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲು ಹಿಂಜರಿದಿದ್ದರು. ಎಸ್ಐಟಿ ಚಾರ್ಜ್ಶೀಟ್ನಲ್ಲಿ ನಾಗೇಂದ್ರ ಅವರ ಹೆಸರೇ ಇಲ್ಲ, ಅವರು ಅಪರಾಧಿ ಅಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಏನು ಮಾಡಲು ಹೊರಟಿದ್ದಾರೆ? ಎಂದು ಆರೋಪಿಸಿದ್ದಾರೆ