ಮಂಡ್ಯ: ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ರಾತ್ರಿ ಮೂರ್ತಿಯ ನಿಮಜ್ಜನಾ ಮೆರವಣಿಗೆ ಅನ್ಯಕೋಮಿನ ಪ್ರಾರ್ಥನಾ ಮಂದಿರದ ಬಳಿ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಕೆಲವು ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ..
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗಲಭೆ ಸಂಬಂಧ 150 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೌದು, ಕರ್ತವ್ಯ ನಿರತ ಪಿಎಸ್ಐ B.J.ರವಿ ಅವರ ದೂರು ಆಧರಿಸಿ ಕೇಸ್ ದಾಖಲಾಗಿದೆ.
150 ಮಂದಿಯ ಮೇಲೆ ಎಫ್ಐಆರ್
ಗಣಪತಿ ಮೂರ್ತಿ ಮೆರವಣಿಗೆ ವೇಳೆ ಗಲಾಟೆ ನಡೆಸಿದ ಸಂಬಂಧ ಪೊಲೀಸರು 150 ಮಂದಿಯ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪೈಕಿ 53 ಮಂದಿ ಆರೋಪಿಗಳ ಹೆಸರು ಮತ್ತು ವಿಳಾಸವನ್ನು ಪತ್ತೆ ಮಾಡಿದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ 109, 115,118, 121, 132, 189, 190 ಸೇರಿದಂತೆ 16 ಸೆಕ್ಷನ್ಗಳಡಿ ಎಫ್ಐಆರ್ ದಾಖಲಾಗಿದೆ.
100-150 ಜನರಿಂದ ಅಲ್ಲಾಹು ಅಕ್ಬರ್ ಘೋಷಣೆ
ನಾಗಮಂಗಲ ಟೌನ್ ಸ್ಟೇಷನ್ ಪಿಎಸ್ಐ ರವಿ ಅವರ ಮಾಹಿತಿ ಮೇರೆಗೆ ಎಫ್ಐಆರ್ ದಾಖಲಾಗಿದೆ. ನಾನು ಮತ್ತು ನಮ್ಮ ಸಿಬ್ಬಂದಿ ಗಣೇಶ ಮೆರವಣಿಗೆಯ ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗ ಮಸೀದಿ ಬಳಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ನೃತ್ಯಮಾಡುತ್ತಿದ್ದರು, ಈ ವೇಳೆ ಮಸೀದಿ ಬಳಿ ಹಾಗೂ ಸುತ್ತಮುತ್ತ ಇದ್ದ ಮುಸ್ಲಿಂ ಕೋಮಿನವರಾದ ಇರ್ಷಾದ್ ಪಾಷ,
ಇಮ್ರಾನ್ ಪಾಷ ಸೇರಿದಂತೆ ಸುಮಾರು 100-150 ಜನರು ಏಕಾಏಕಿ ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದರು. ಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಿದ್ದಾಗ ನಾನು ಮತ್ತು ನಮ್ಮ ಸಿಬ್ಬಂದಿ ಎರಡೂ ಕೋಮಿನವರಿಗೆ ಸಮಾಧಾನ ಮಾಡುತ್ತಿದ್ದೆವು ಎಂದು ವಿವರಿಸಿದ್ದಾರೆ.
ಪೊಲೀಸರ ಕೊಲೆಗೆ ಯತ್ನ?
ಎರಡೂ ಕೋಮಿನವರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಇದ್ದಿದ್ದರಿಂದ ನಾವು, ನಮ್ಮ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿದ್ವಿ. ಕೆಲವರು ಮಚ್ಚು, ಲಾಂಗ್, ದೊಣ್ಣೆ ಕಲ್ಲುಗಳನ್ನು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ನಮ್ಮ ಮೇಲೆ ಬೀಸುತ್ತಾ ಓಡಿಬಂದರು ಎಂದು ಎಫ್ಐಆರ್ನಲ್ಲಿ ಪಿಎಸ್ಐ ತಿಳಿಸಿದ್ದಾರೆ.