2023ರ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿಯಾಗಿ ತಯಾರಿ ನಡೆಸುತ್ತಿವೆ. ಈಗಾಗ್ಲೆ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ತಮ್ಮ-ತಮ್ಮ ಪಕ್ಷದ ಪರವಾಗಿ ತಾರಾ ಪ್ರಚಾರಕರನ್ನು ಸೆಳೆಯುವ ತಂತ್ರವೂ ನಡೆಯುತ್ತಿದೆ.
ಇದೀಗ ಖ್ಯಾತ ನಿರ್ದೇಶಕ, ಲೇಖಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ರಾಜಕೀಯ ಪಕ್ಷವೊಂದು ಚುನಾವಣಾ ಟಿಕೆಟ್ ನೀಡುವುದಾಗಿ ಹೇಳಿದ್ದು, ಆದರೆ ಚುನಾವಣೆಗೆ ಸ್ಪರ್ಧಿಸಲು ನಾಗತಿಹಳ್ಳಿ ಚಂದ್ರಶೇಖರ್ ನಿರಾಕರಿಸಿದ್ದಾಗಿ ಚಂದ್ರಶೇಖರ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ”ನನಗೂ ಒಂದು ಪಕ್ಷದಿಂದ ಚುನಾವಣಾ ಟಿಕೆಟ್ ಕೊಡುವುದಕ್ಕೆ ಬಂದಿದ್ದರು. ನಮ್ಮೂರಿನಲ್ಲಿ ನಾನು ಮಾಡಿದ ಕೆಲಸ ನೋಡಿ ಮೆಚ್ಚಿ ಟಿಕೆಟ್ ನೀಡುವುದಾಗಿ ಹೇಳಿದರು. ಆದರೆ ಅದನ್ನು ನಾನು ನಿರಾಕರಿಸಿದ್ದೇನೆ, ಎಚ್ಚೆತ್ತ ಪ್ರಜೆಗಳಿಗಾಗಿ ಮಾಡಬೇಕಾದ ಕೆಲಸ ಬಹಳ ಇದೆ, ಚುನಾವಣೆ ಅಲ್ಲದೇ ಬೇರೆ ಬೇರೆ ಕೆಲಸಗಳಿವೆ, ಪ್ರಸ್ತುತ ರಾಜಕಾರಣ ನಾವು ಹತ್ತಿರ ಪ್ರವೇಶಿಸದಷ್ಟು ತುಂಬಾ ಭೀಕರವಾಗಿದೆ ಹಣ ಮತ್ತು ಜಾತಿ ಪ್ರಬಲವಾದ ಶಕ್ತಿ ಆಗಿವೆ, ಆ ಎರಡನ್ನೂ ಬಳಸದೇ ಇರುವ ಪರಿಸರ ಬಂದರೆ ನಮ್ಮಂಥವರು ಚುನಾವಣೆಗೆ ಬರಬಹುದು” ಎಂದಿದ್ದಾರೆ.
ಸಕ್ರಿಯ ರಾಜಕಾರಣದಲ್ಲಿ ನಾವು ಮತದಾರರಷ್ಟೇ. ನಿಷ್ಠೆಯಿಂದ ಮತದಾನ ಮಾಡುವೆ. ಯಾವುದೇ ಪಕ್ಷ ಅಥವಾ ಅಭ್ಯರ್ಥಿಯ ಹಿಂದೆ ಹೋಗುವುದಿಲ್ಲ. ಯಾರದೇ ಪ್ರಚಾರ ಮಾಡುವುದಿಲ್ಲ, ಚಲನಚಿತ್ರ ಕ್ಷೇತ್ರದಲ್ಲಿ ಕೆಲವರು ಪ್ರಚಾರ, ಚುನಾವಣೆ ಸ್ಪರ್ಧೆಗೆ ಹೋಗುತ್ತಿದ್ದಾರೆ, ನಾನು ಅದರಿಂದ ದೂರ. ದೇಶಕ್ಕೆ ಒಳ್ಳೆಯ ಪ್ರಜಾಪ್ರಭುತ್ವ ಬರಬೇಕಿದೆ, ಅದಕ್ಕಾಗಿ ಪ್ರಜ್ಞಾವಂತರ ಮತದಾರರ ತಯಾರಿ ಮಾಡಬೇಕಿದೆ, ಸಾಂಸ್ಕೃತಿಕ ರೂಪದಲ್ಲಿ ನಾನು ಕೆಲಸ ಮಾಡುತ್ತಿರುವೆ, ಅದೇ ಸಾಕು, ನೇರವಾದ ಚುನಾವಣೆಗೆ ಧುಮುಕುವುದು ಯಾಕೆ ಬೇಕು? ಅದಕ್ಕಾಗಿಯೇ ವೃತ್ತಿವಂತ ರಾಜಕಾರಣಿಗಳು ಇದಾರಲ್ವಾ? ಎಂದು ನಾಗತಿಹಳ್ಳಿ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ.
”ನಂಜುಡಸ್ವಾಮಿಯವರು ರೈತ ಸಂಘ, ಲಂಕೇಶ್ ಪತ್ರಿಕಾ ರಂಗದಲ್ಲಿದ್ದರು, ಇವರಿಬ್ಬರು ತಮ್ಮ ರಂಗದ ಮೂಲಕ ರಾಜಕಾರಣಕ್ಕೆ ಹೊಸ ಕಾಯಕಲ್ಪ ಮಾಡಲು ಹೊರಟಿದ್ದರು ಸಹಜವಾಗಿ ನಮ್ಮಥರಹದ ಬರಹಗಾರರು ಅವರೊಂದಿಗೆ ಗುರುತಿಸಿಕೊಳ್ಳುತ್ತಿದ್ದೆವು, ಆದರೆ ಪ್ರಸ್ತುತ ರಾಜಕಾರಣದಲ್ಲಿ ಅಂತಹ ಯಾವ ಛಾಯೆಯೂ ಇಲ್ಲ, ಆ ತರಹದ ನಾಯಕತ್ವವೇ ಈಗಿಲ್ಲ, ಈಗಿನ ರಾಜಕಾರಣದಲ್ಲಿ ಸಾಂಸ್ಕೃತಿಕ ಶೂನ್ಯತೆ ಇದೆ ಹಾಗಾಗಿ ಈಗಿನ ಚುನಾವಣೆಯಲ್ಲಿ ಕೃತಕ ಸಿದ್ಧಾಂತಗಳನ್ನು ಜನರ ಮೇಲೆ ಹೇರಲಾಗುತ್ತಿದೆ, ಜನರಿಗೆ ಬೇಡವಿಲ್ಲದ ಮಾತು, ವಿದ್ಯಮಾನಗಳು ನಡೆಯುತ್ತಿವೆ” ಎಂದು ನಾಗತಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.