ಪಚ್ಚೆ ಹೆಸರು ಮತ್ತು ಹೆಸರು ಕಾಳು ಎಂದು ಕರೆಯಲ್ಪಡುವ ಹೆಸರು ಕಾಳು ಹೆಸರೇ ಹೇಳುವಂತೆ ಪಚ್ಚೆಯ ಹಸಿರು ಬಣ್ಣದಲ್ಲಿ ಚಿಕ್ಕದಾದ ಗಾತ್ರವನ್ನು ಹೊಂದಿರುತ್ತದೆ. ಇದು ಅತ್ಯಂತ ಚಿಕ್ಕ ಕಾಳಾದರೂ ಇದರಲ್ಲಿ ಇರುವ ಆರೋಗ್ಯದ ಗುಣವು ಅದ್ಭುತ ಸಂಗತಿಗಳಿಂದ ಕೂಡಿದೆ. ಗಣನೀಯವಾಗಿ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ದಲಾವಣೆ ಉಂಟಾಗುವುದು. ಜೊತೆಗೆ ಕೆಲವು ಆರೋಗ್ಯ ಸಮಸ್ಯೆ ಇದ್ದರೂ ಗುಣಮುಖವಾಗುವುದು ಎಂದು ವೈಜ್ಞಾನಿಕ ಶಾಸ್ತ್ರ ತಿಳಿಸುತ್ತದೆ.
ರಕ್ತ ಕಣಗಳನ್ನು ಹೆಚ್ಚಿಸುವುದು
ಹೆಸರು ಕಾಳಿನಲ್ಲಿ ಫೋಲೇಟ್, ವಿಟಮಿನ್ ಬಿ9 ಸಮೃದ್ಧವಾಗಿವೆ. ಇವು ದೇಹದಲ್ಲಿ ಹೊಸ ರಕ್ತಕಣಗಳ ಸೃಷ್ಟಿಗೆ ಸಹಾಯ ಮಾಡುತ್ತವೆ. ಅದರಲ್ಲೂ ಕೆಂಪು ರಕ್ತ ಕಣಗಳನ್ನು ಹೆಚ್ಚುವಂತೆ ಮಾಡುವುದು. ಹಾಗಾಗಿ ಗರ್ಭಿಣಿಯರಿಗೆ ಅತ್ಯುತ್ತಮವಾದದ್ದು. ಯಾರು ಗರ್ಭಾವಸ್ಥೆಯನ್ನು ಹೊಂದಲು ಯೋಜನೆ ಮಾಡುವರೋ ಅಂತಹವರು ಸಹ ತಮ್ಮ ಆಹಾರದಲ್ಲಿ ಹೆಸರು ಕಳನ್ನು ಸೇರಿಸಿಕೊಳ್ಳಬಹುದು. ಆರೋಗ್ಯಕರ ರಕ್ತಕಣಗಳಿಂದಾಗಿ ಮಗುವಿನ ಬೆಳವಣಿಗೆಯು ಉತ್ತಮವಾಗುವುದು. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು. ಗರ್ಭಾವಸ್ಥೆಯಲ್ಲಿ ಇರುವವರು ಹೆಸರು ಕಾಳಿನ ದೋಸೆಯನ್ನು ಸೇವಿಸಬಹುದು.
ಹೃದಯದ ಆರೋಗ್ಯಕ್ಕೆ ಉತ್ತಮ
ಹೆಸರು ಕಾಳಿನಲ್ಲಿ ಫ್ಲೋವೊನೈಡ್ ಆಂಟಿ ಆಕ್ಸಿಡೆಂಟ್ ಅಧಿಕವಾಗಿದೆ. ಇದು ಸ್ವತಂತ್ರ ರಾಡಿಕಲ್ಸನಿಂದ ಉಂಟಾದ ಹಾನಿಯನ್ನು ಸುಲಭವಾಗಿ ತಡೆಯುವುದು. ಜೊತೆಗೆ ಸ್ವತಂತ್ರ ರಾಡಿಕಲ್ಸಗಳನ್ನು ನಿಯಂತ್ರಣದಲ್ಲಿ ಇಡುವುದು. ರಕ್ತವು ಆರೋಗ್ಯಕರ ಸ್ಥಿರತೆಯನ್ನು ಕಾಯ್ದುಕೊಂಡು, ದೇಹದಲ್ಲಿ ಉತ್ತಮ ಸಂಚಾರವನ್ನು ಒಳಗೊಳ್ಳುವಂತೆ ಮಾಡುವುದು. ಇದರಲ್ಲಿ ಇರುವ ವಿಟಮಿನ್ ಬಿ ಗುಣವು ಸಾಮಾನ್ಯ ಹೃದಯ ಬಡಿತದಿಂದ ಕೂಡಿರುವಂತೆ ಮಾಡುವುದು. ಇದರಲ್ಲಿ ಇರುವ ಮ್ಯಾಗ್ನಿಸಿಯಮ್ ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಅಡೆತಡೆಯನ್ನು ನಿವಾರಿಸುವುದು. ಅನಾರೋಗ್ಯಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್ಗಳನ್ನು ತಡೆಯಲು ಸಹಾಯ ಮಾಡುವುದು.
ಅಧಿಕ ಪ್ರೋಟೀನ್ಗಳನ್ನು ಒಳಗೊಂಡಿದೆ
ಒಂದು ಕಪ್ ಹೆಸರುಕಾಳಿನಲ್ಲಿ ಶೇ 28ರಷ್ಟು ಪ್ರೋಟಿನ್ಗಳಿರುತ್ತವೆ. ದೇಹದಲ್ಲಿ ಪ್ರೋಟೀನ್ಗಳ ಕೊರತೆ ಉಂಟಾದಾಗ ಸಾಕಷ್ಟು ಅನಾರೋಗ್ಯಗಳು ಕಾಣಿಸಿಕೊಳ್ಳುತವೆ. ನಿತ್ಯದ ಆಹಾರದಲ್ಲಿ ಹೆಸರು ಕಾಳನ್ನು ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತಕಣಗಳ ಉತ್ಪತ್ತಿ ಮತ್ತು ಮೂಳೆಗಳು ಬಲಗೊಳ್ಳುವುದು. ಜೊತೆಗೆ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅದಕ್ಕಾಗಿ ನೀವು ಮೊಳಕೆ ಬರಿಸಿದ ಹೆಸರುಕಾಳನ್ನು ಸಲಡ್ಗಳ ರೀತಿಯಲ್ಲಿ ಸೇವಿಸುವುದು, ಅಥವಾ ಮೊಳಕೆ ಬರಿಸಿದ ಕಾಳುಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು.
ಅನಗತ್ಯ ತೂಕ ಇಳಿಸಲು ಉತ್ತಮ
ಹೆಸರು ಕಾಳಿನಲ್ಲಿ ಕಡಿಮೆ ಪ್ರಮಾಣದ ಕೊಬ್ಬು ಮತ್ತು ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಹಾಗೂ ನಾರಿನಂಶಗಳನ್ನು ಒಳಗೊಂಡಿರುತ್ತವೆ. ನಿತ್ಯದ ಆಹಾರದಲ್ಲಿ ಅಥವಾ ಯೋಜನಾ ಬದ್ಧ ಆಹಾರ ಕ್ರಮದಲ್ಲಿ ಹೆಸರು ಕಾಳನ್ನು ಸೇರಿಸಿಕೊಂಡರೆ ದೇಹದಲ್ಲಿ ಇರುವ ಅನಗತ್ಯ ಕೊಬ್ಬಿನಂಶವು ಕರಗುವುದು. ಇದು ತೂಕ ಇಳಿಸಲು ಅತ್ಯಂತ ಸಹಾಯಕಾರಿ ಎಂದು ವೈದ್ಯರು ಅಭಿಪ್ರಾಯಿಸುತ್ತಾರೆ. ಅಧಿಕ ಸಮಯಗಳ ಕಾಲ ಹಸಿವನ್ನು ತಡೆ ಹಿಡಿಯುವ ಶಕ್ತಿಯನ್ನು ಪಡೆದುಕೊಂಡಿದೆ. ಮೊಳಕೆ ಭರಿಸಿದ ಹೆಸರುಕಾಳು ಹಾಗೂ ಈರುಳ್ಳಿಯ ಮಿಶ್ರಣದಲ್ಲಿ ತಯಾರಿಸಲಾಗುವ ಟಿಕ್ಕಿಯನ್ನು ಸೇವಿಸಬಹುದು. ಕೆಲವು ಅಧ್ಯಯನಗಳ ಪ್ರಕಾರ ಇದು ರಕ್ತದಲ್ಲಿ ಇರುವ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿ ಇರುವಂತೆ ಮಾಡುವುದು. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ನಿಯಂತ್ರಣದಲ್ಲಿ ಇಡುವುದು.
ಕಡಿಮೆ ರಕ್ತದೊತ್ತಡ
ಬೇಳೆ ಕಾಳುಗಳು ಸಾಮಾನ್ಯವಾಗಿ ಆಂಟಿ ಆಕ್ಸಿಡೆಂಟ್ಗಳನ್ನು ಸಮೃದ್ಧವಾಗಿ ಪಡೆದುಕೊಂಡಿರುತ್ತವೆ. ಅವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹೆಸರು ಕಾಳು ಎಲ್ ಡಿಎಲ್ ಆಕ್ಸಿಡೀಕರಣವನ್ನು ನಿಯಂತ್ರಣದಲ್ಲಿ ಇಡುವುದು. ಜೊತೆಗೆ ರಕ್ತದ ಉತ್ತಮ ಹರಿವಿಗೆ ಪ್ರಚೋದನೆ ನೀಡುವುದು. ಇದಲ್ಲಿ ಇರುವ ಸಮೃದ್ಧವಾದ ಪೊಟ್ಯಾಸಿಯಮ್ ರಕ್ತದಲ್ಲಿ ಇರುವ ಅನಗತ್ಯ ಸೋಡಿಯಮ್ ಅನ್ನು ನಿವಾರಿಸುವುದು. ಜೊತೆಗೆ ಕಡಿಮೆ ಪ್ರಮಾಣದ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದಂತಹ ಯಾವ ಸಮಸ್ಯೆ ಇದ್ದರೂ ಅದನ್ನು ನಿಯಂತ್ರಿಸುವುದು. ನಿತ್ಯದ ಆಹಾರದಲ್ಲಿ ಹೆಸರುಕಾಳನ್ನು ಇತರ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳುವುದು ಅಥವಾ ಮೊಳಕೆ ಬರಿಸಿ, ಸಲಾಡ್ ರೀತಿಯಲ್ಲಿ ಸೇವಿಸಬಹುದು.
ಹಾರ್ಮೋನ್ಗಳ ಸಮಸ್ಯೆಗೆ ಪರಿಹಾರ
ಹೆಸರು ಕಾಳು ಜಿಂಕ್ ಅಂಶವನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವುದು. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಮೆಟಾಬೊಲಿಸಮ್ ಶಕ್ತಿಯನ್ನು ಹೆಚ್ಚಿಸುವುದು. ಅಲ್ಲದೆ ಮಹಿಳೆಯರಿಗೆ ಮತ್ತು ಪುರುಷರಿಗೆ ಲೈಂಗಿಕ ಕ್ರಿಯೆಗೆ ಅನುವು ಮಾಡುವ ಹಾರ್ಮೋನ್ಗಳ ಸಮಸ್ಯೆಗಳನ್ನು ನಿವಾರಿಸುವುದು. ಮಹಿಳೆಯರಲ್ಲಿ ಆರೋಗ್ಯಕರ ಅಂಡಾಶಯದ ಮೊಟ್ಟೆ ಬಿಡುಗಡೆ ಮಾಡಲು ಸಹಾಯ ಮಾಡುವುದು. ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಗುಜರಾತಿ ಆಹಾರವಾದ ಹೆಸರುಕಾಳಿನ ಸುಖ ಮೂಂಗ್ ಆಹಾರ ಅಥವಾ ಚಪಾತಿಯೊಂದಿಗೆ ಹೆಸರುಕಾಳಿನ ಪಲ್ಯ, ಬಾಜಿಗಳನ್ನು ಸೇವಿಸಬಹುದು.
ಉತ್ತಮ ದೃಷ್ಟಿಗೆ ಸಹಾಯ
ಬೇಳೆ ಕಾಳುಗಳಲ್ಲಿ ಇರುಳುಗಣ್ಣು ಸಮಸ್ಯೆಯನ್ನು ನಿವಾರಿಸುವ ಶಕ್ತಿಯಿರುತ್ತದೆ. ಹೆಸರು ಕಾಳಿನಲ್ಲಿ ಇರುವ ಜಿಂಕ್ ಅಂಶವು ವಿಟಮಿನ್ ಎ ಉತ್ಪಾದನೆಗೆ ಸಹಾಯ ಮಾಡುವುದು. ದೇಹದಲ್ಲಿ ಅಗತ್ಯವಾದ ವಿಟಮಿನ್ ಎ ಪ್ರಮಾಣವು ಸಮತೋಲನದಲ್ಲಿ ಇದ್ದಾಗ ರಾತ್ರಿ ಕುರುಡು ನಿವಾರಣೆಯಾಗುವುದು. ಹೆಸರು ಕಾಳನ್ನು ಪಾಲಕ್ ಸೊಪ್ಪುಗಳೊಂದಿಗೆ ಬೆರೆಸಿ ಆಹಾರವನ್ನು ತಯಾರಿಸಿದರೆ ಅದರ ಶಕ್ತಿಯು ದ್ವಿಗುಣವಾಗುವುದು. ಇಲ್ಲವೇ ಮೊಳಕೆ ಬರಿಸಿದ ಹೆಸರುಕಾಳನ್ನು ಸೇವಿಸಬಹುದು.