ಚಾಮರಾಜನಗರ : ಗೇಯೋ ಎತ್ತಿಗೆ ಹುಲ್ಲು ಹಾಕ್ತೀರೋ? ಕಳ್ ಎತ್ತಿಗೆ ಹುಲ್ಲು ಹಾಕ್ತೀರೋ ಯೋಚಿಸಿ ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು. ರಾಜ್ಯದ ಜನತೆ ಬರಗಾಲಕ್ಕೆ ತುತ್ತಾಗಿದ್ದಾರೆ. ನಮ್ಮ ಜನ ಕಟ್ಟಿದ ತೆರಿಗೆಯಲ್ಲಿನ ಪಾಲು ನಮಗೆ ವಾಪಾಸ್ ಕೊಡಿ, ಬರಗಾಲಕ್ಕೆ ನಮ್ಮ ಪಾಲಿನ ಅನುದಾನ ಕೊಡಿ ಅಂತ ನಾವು ಪತ್ರ ಬರೆದು ಹೋರಾಟ ಮಾಡಿದರೂ ಮೋದಿ ಸರ್ಕಾರ ನಮ್ಮ ಪಾಲಿನ ನಯಾಪೈಸೆ ಕೊಡಲಿಲ್ಲ. ಇಂಥವರಿಗೆ ಮತ ಹಾಕಿದ್ರೆ ಆ ಮತಕ್ಕೆ ಗೌರವ ಬರುತ್ತದಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯದ ಬಿಜೆಪಿ ನಾಯಕರು ಕೋಲೆ ಬಸವನಂತೆ ತಲೆ ಆಡಿಸ್ತಾರೆ. ಮೋದಿ ರಾಜ್ಯಕ್ಕೆ ಮಾಡಿದ ಅನ್ಯಾಯ ಸರಿ, ಬರಗಾಲ ಬಂದ್ರೂ ಮೋದಿ ಅನುದಾನ ಕೊಡದೇ ಇದ್ದದ್ದೇ ಸರಿ, ಮೋದಿಯವರು ಪೆಟ್ರೋಲ್-ಡೀಸೆಲ್-ಗ್ಯಾಸ್-ರಸಗೊಬ್ಬರ ಬೆಲೆಯನ್ನು ಹೆಚ್ಚಿಸಿದ್ದೇ ಸರಿ…ಎಂದು ಬಿಜೆಪಿ ನಾಯಕರು ಕೋಲೆ ಬಸವನಂತೆ ತಲೆ ತೂಗುತ್ತಿದ್ದಾರೆ. ಇಂಥವರಿಗೆ ನಿಮ್ಮ ಮತ ಹೋಗಬೇಕಾ ಎಂದು ಕುಟುಕಿದರು.
ನರೇಂದ್ರ ಮೋದಿಯವರು ಹೇಳಿದ್ದರಲ್ಲಿ ಒಂದೇ ಒಂದನ್ನೂ ಜಾರಿ ಮಾಡಿಲ್ಲ. ಬದಲಿಗೆ ಜನರ ಮುಂದೆ ಆಶ್ವಾಸನೆ ಕೊಟ್ಟು ಅದಕ್ಕೆ ಉಲ್ಟಾ ನಡೆದುಕೊಂಡಿದ್ದಾರೆ. ವಿದೇಶದಿಂದ ಕಪ್ಪು ಹಣ ತರಲಿಲ್ಲ, ಭಾರತೀಯರ ಖಾತೆಗೆ 15 ಲಕ್ಷ ಹಾಕಲಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು. ಆದರೆ ಹೊಸ ಉದ್ಯೋಗ ಸೃಷ್ಟಿ ಮಾಡೋದಿರಲಿ, ಇರೋ ಕೆಲಸಗಳೂ ಬಂದ್ ಆದ್ವು. ಇಂಥವರಿಗೆ ನಿಮ್ಮ ಕೇಳುವ ಮುಖ ಇದೆಯಾ ಎಂದು ಪ್ರಶ್ನಿಸಿದರು.
