ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬಿಜೆಪಿ (BJP) ಈಗ ಮತ್ತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಕರೆಸಲು ಸಿದ್ಧತೆ ನಡೆಸಿದೆ. ಹೌದು. ಚುನಾವಣೆ (Karnataka Election) ಘೋಷಣೆಗೂ ಮೊದಲೇ 7 ಬಾರಿ ರಾಜ್ಯಕ್ಕೆ ಮೋದಿ ಆಗಮಿಸಿದ್ದಾರೆ. ಈಗ ಚುನಾವಣಾ ಪ್ರಚಾರದ ಕಡೇ ದಿನದವರೆಗೂ ಮೋದಿ ಅವರನ್ನು ಕರೆಸಲು ಬಿಜೆಪಿ ಮುಂದಾಗಿದೆ.
ಬಿಜೆಪಿ ಪ್ಲ್ಯಾನ್ ಏನು?
ರಾಜ್ಯದಲ್ಲಿ ಒಟ್ಟು 224 ಕ್ಷೇತ್ರಗಳಿರುವುದರಿಂದ ಪ್ರತಿ 12-14 ಕ್ಷೇತ್ರಗಳಿಗೆ ಒಂದರಂತೆ ಬೃಹತ್ ಸಮಾವೇಶ (Modi Rally) ನಡೆಸಲು ಸಿದ್ಧತೆ ನಡೆದಿದೆ.ರಾಜ್ಯವನ್ನು 6 ಭಾಗವನ್ನಾಗಿ ವಿಂಗಡಿಸಿರುವ ಬಿಜೆಪಿ ಪ್ರದೇಶವಾರು, ಕಾಂಗ್ರೆಸ್ (Congress), ಜೆಡಿಎಸ್ (JDS) ಭದ್ರಕೋಟೆಯಲ್ಲಿ ಹೆಚ್ಚು ಸಮಾವೇಶ ಆಯೋಜಿಸಲಿದೆ. ಪ್ರತಿ ಭಾಗದಲ್ಲಿ ಕನಿಷ್ಠ 3 ಕಾರ್ಯಕ್ರಮಗಳನ್ನು ನಡೆಸಲು ಚಿಂತನೆ ನಡೆದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟಾರ್ಗೆಟ್ ಮಾಡಿ ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚು ಸಮಾವೇಶ ನಡೆಯಲಿದೆ. ಉಳಿದಂತೆ ಹಳೇ ಮೈಸೂರು, ಕರಾವಳಿ, ಕಿತ್ತೂರು, ಮಧ್ಯ ಕರ್ನಾಟಕ, ಬೆಂಗಳೂರು ಕೇಂದ್ರೀಕರಿಸಿ ಸಮಾವೇಶ ಆಯೋಜನೆಯಾಗಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18-20 ಸ್ಥಾನಗಳನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮ ಫಲಿತಾಂಶ ಪ್ರಕಟವಾದಾಗ ಬಿಜೆಪಿ 25 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ ಬಿಜೆಪಿ ಈ ಪ್ರಮಾಣದ ಸ್ಥಾನವನ್ನು ಗೆಲ್ಲಲು ಕಾರಣವಾಗಿದ್ದು ಮೋದಿ ವರ್ಚಸ್ಸು. ಈ ಕಾರಣಕ್ಕೆ ಈ ಚುನಾವಣೆಯಲ್ಲೂ ಮೋದಿ ವರ್ಚಸ್ಸು ಬಳಸಿಕೊಂಡು ಬಿಜೆಪಿ ಮತ ಬೇಟೆ ಮಾಡಲು ಪ್ಲ್ಯಾನ್ ರೂಪಿಸಿದೆ.