ತೆಲುಗಿನ ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ನಟನೆಯ ‘ಮತ್ತೆ ಮದುವೆ’ (ಮಲ್ಲಿ ಪೆಲ್ಲಿ) (Matte Maduve) ಸಿನಿಮಾ ವಿರುದ್ಧ ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ (Court) ಮೋರೆ ಹೋಗಿದ್ದಾರೆ. ತಮ್ಮ ಮಾನಹಾನಿ ಮಾಡುವಂತಹ ದೃಶ್ಯಗಳು ಸಿನಿಮಾದಲ್ಲಿ ಇವೆ ಎಂದು ಅವರು ಕೋರ್ಟಿಗೆ ತಿಳಿಸಿದ್ದಾರೆ. ವೈಯಕ್ತಿಕ ಜೀವನಕ್ಕೆ ಧಕ್ಕೆ ತರುವಂತಹ ಅಂಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಹಾಗಾಗಿ ಸಿನಿಮಾ ಪ್ರದರ್ಶನವಾಗದಂತೆ ತಡೆಯಬೇಕು ಎಂದು ಅವರು ಕುಕಟ್ ಪಲ್ಲಿಯಲ್ಲಿರುವ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಚಿತ್ರದ ಟೀಸರ್ ನಲ್ಲಿ ಹಲವು ವಿಷಯಗಳನ್ನು ಬಿಚ್ಚಿಡಲಾಗಿದೆ. ತೆಲುಗು ಇಂಡಸ್ಟ್ರೀಯವರು ಕನ್ನಡದ ಮೇಲೆ ಕಣ್ಣು ಹಾಕ್ತಿದ್ದಾರೆ ಎಂಬ ಪಂಚಿಂಗ್ ಡೈಲಾಗ್ ಮೂಲಕ ಶುರುವಾಗುವ ಟೀಸರ್ ಥೇಟ್ ನರೇಶ್ ಪವಿತ್ರಾ ರಿಯಲ್ ಕಥೆಯಂತಿದೆ. ನರೇಶ್ ಮೂರನೇ ಪತ್ನಿ ನಡೆಸಿದ ಬೀದಿ ರದ್ದಾಂತ, ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ, ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಎಲ್ಲವೂ ಟೀಸರ್ ನಲ್ಲಿ ಬಿಚ್ಚಿಡಲಾಗಿದೆ.
ನರೇಶ್ ಲೈಫ್ ಸ್ಟೋರಿಯಲ್ಲಿ ಮೂರನೇ ಪತ್ನಿ ರಮ್ಯಾ (Ramya) ಅವರೇ ವಿಲನ್ ಆಗಿ ಕಾಣಿಸಿಕೊಂಡಿದ್ದರೆ, ಪವಿತ್ರಾ ಲೋಕೇಶ್ ಹಿನ್ನೆಲೆಯ ಕಥೆಯಲ್ಲಿ ವಿಲನ್ ಆಗಿ ನಿಂತವರು ಪತಿ ಸುಚೇಂದ್ರ ಪ್ರಸಾದ್ (Suchendra Prasad) ಎನ್ನುವಂತೆ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾಗೆ ರಮ್ಯಾ ಮತ್ತು ಸುಚೇಂದ್ರ ಪ್ರಸಾದ್ ಹಿನ್ನೆಲೆಯ ಪಾತ್ರಗಳೇ ಖಳನಾಯಕರಾ? ಟ್ರೈಲರ್ ನೋಡಿದ ಮೇಲೆ ಇಂಥದ್ದೊಂದು ಪ್ರಶ್ನೆಯು ಮೂಡದೇ ಇರದು. ನೈಜ ಪಾತ್ರಗಳನ್ನು ಹೋಲುವಂತೆಯೇ ದೃಶ್ಯಗಳನ್ನು ಕಟ್ಟಿರುವುದರಿಂದ ರಮ್ಯಾ ಮತ್ತು ಸುಚೇಂದ್ರ ಪ್ರಸಾದ್ ನೆನೆಪಾಗುವುದು ಸುಳ್ಳಲ್ಲ.
ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು (M.S. Raju) ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.