ಗಾಜಾದಲ್ಲಿನ ಹೋರಾಟವನ್ನು ಬೆಂಬಲಿಸುವ ಮೂಲಕ ತನ್ನ ಪೂರ್ವಾಧಿಕಾರಿ ಸಯ್ಯದ್ ಹಸನ್ ನಸ್ರಲ್ಲಾ ಅಳವಡಿಸಿಕೊಂಡ ಯುದ್ಧ ಕಾರ್ಯತಂತ್ರವನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹಿಜ್ಬುಲ್ಲಾದ ಹೊಸ ನಾಯಕ ಶೇಖ್ ನಯೀಮ್ ಖಾಸಿಮ್ ಹೇಳಿಕೆ ನೀಡಿದ್ದಾರೆ.
“ರಾಜಕೀಯ, ಜಿಹಾದಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಯ್ಯದ್ ಹಸನ್ ನಸ್ರಲ್ಲಾ ಅವರ ಕಾರ್ಯಸೂಚಿಯನ್ನು ಮುಂದುವರಿಸಿಕೊಂಡು ಹೋಗುವೆ” ಎಂದು ಖಾಸಿಮ್ ಹಿಜ್ಬುಲ್ಲಾದ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ತಮ್ಮ ಮೊದಲ ದೂರದರ್ಶನ ಭಾಷಣದಲ್ಲಿ ಅವರು ಹೇಳಿದರು.
ಈ ಪ್ರದೇಶದಲ್ಲಿ ಇಸ್ರೇಲ್ ಒಡ್ಡಿರುವ ಬೆದರಿಕೆ ಎದುರಿಸಲು ಗಾಜಾವನ್ನು ಬೆಂಬಲಿಸುವುದು ಅತ್ಯಗತ್ಯ ಎಂದು ಖಾಸಿಮ್ ಒತ್ತಿ ಹೇಳಿದರು. “ಇದು ನಮ್ಮ ಭೂಮಿಯಾಗಿರುವುದರಿಂದ ನೀವು ಖಂಡಿತವಾಗಿಯೂ ಸೋಲುವಿರಿ. ನಮ್ಮ ದೇಶಗಳಿಂದ ಹೊರಟು ಹೋಗಿ; ನೀವು ಅಲ್ಲಿಯೇ ಇದ್ದರೆ, ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಇಸ್ರೇಲಿಗಳನ್ನು ಉದ್ದೇಶಿಸಿ ಹೇಳಿದರು. ಇರಾನ್ ಯಾವುದೇ ಗುಪ್ತ ಅಜೆಂಡಾಗಳಿಲ್ಲದೇ ಹಿಜ್ಬುಲ್ಲಾವನ್ನು ಬೆಂಬಲಿಸುತ್ತಿದೆ ಎಂದು ಖಾಸಿಮ್ ಹೇಳಿದರು.
“ನಮ್ಮ ಗಡಿಗಳಲ್ಲಿ ಲೆಬನಾನ್ ಯೋಧರೊಂದಿಗೆ ಕೈಜೋಡಿಸಿ ಇಸ್ರೇಲ್ ವಿರುದ್ಧ ಹೋರಾಡಿ ಲೆಬನಾನ್ ಭೂಮಿಯನ್ನು ಮುಕ್ತಗೊಳಿಸುತ್ತಿದ್ದೇವೆ; ಕೆಲವರು ಹೇಳಿದಂತೆ ಇಸ್ರೇಲ್ ವಿರುದ್ಧ ಹೋರಾಡಲು ಇರಾನ್ ನಮ್ಮನ್ನು ಬಳಸುತ್ತಿಲ್ಲ” ಎಂದು ಅವರು ಹೇಳಿದರು.
ನಸ್ರಲ್ಲಾ ಹತ್ಯೆಯಿಂದ ಹಿಜ್ಬುಲ್ಲಾ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ ಎಂಬುದನ್ನು ಒಪ್ಪಿಕೊಂಡ ಖಾಸಿಮ್, ಖಾಲಿ ಇರುವ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡಲು ಈ ಗುಂಪು ಸಮರ್ಥವಾಗಿದೆ ಎಂದು ಪುನರುಚ್ಚರಿಸಿದರು.