ಮುಸ್ಲಿಂ ಜೋಡಿ ಹಸೆಮಣೆ ಏರುವ ವೇಳೆ ರಾಷ್ಟ್ರಗೀತೆ ಹಾಡು ಕೇಳಿ ಬಂದಿದ್ದು, ಆ ವೇಳೆ ಮುಸ್ಲಿಂ ಬಾಂಧವರು ಸಲ್ಲಿಸಿದ ಗೌರವ ಸಲ್ಲಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸ್ವಾತಂತ್ರ ದಿನಾಚರಣೆಯಂದು ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದು, ಈ ಮದುವೆ ನಡೆಯುತ್ತಿದ್ದ ವೇಳೆಯೇ ರಾಷ್ಟ್ರಗೀತೆಯ ಗಾಯನ ಕೇಳಿ ಬಂದಿದೆ. ಹೀಗಾಗಿ ಮದುವೆಯಲ್ಲಿ ಸೇರಿದ್ದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುತ್ತಿದ್ದಾರೆ. ಇದರ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋ ವೀಕ್ಷಿಸಿ ನವ ಜೋಡಿಗೆ ಶುಭ ಹಾರೈಸುವ ಜೊತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆದರೆ ಇದು ಎಲ್ಲಿ ನಡೆದಿರುವ ಮದುವೆ ಎಂಬ ಉಲ್ಲೇಖ ವೀಡಿಯೋದಲ್ಲಿ ಇಲ್ಲ, ಆದರೆ ವೇಷಭೂಷಣ ನೋಡಿದರೆ ಇದು ಬಹುಶಃ ಕೇರಳದ ಮುಸ್ಲಿಂ ಸಮುದಾಯದಲ್ಲಿ ನಡೆದಿರುವ ಮದುವೆ ಎಂಬುದು ಖಚಿತವಾಗುತ್ತಿದೆ.
ಜೊತೆಗೆ ಅನೇಕರು ಮಲೆಯಾಳಂ ಭಾಷೆಯಲ್ಲಿ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ದೊಡ್ಡದಾದ ಹಾಲೊಂದರಲ್ಲಿ ಮದುವೆ ನಡೆಯುತ್ತಿದ್ದು, ಸ್ಟೇಜ್ನಲ್ಲಿ ಬಿಳಿ ವಸ್ತ್ರ ಧರಿಸಿದ ಮುಸ್ಲಿಂ ಮೌಲ್ವಿಗಳು ಮದುಮಗನ ಜೊತೆ ಮದುವೆಯ ಸಂಪ್ರದಾಯಗಳನ್ನು ಮಾಡುತ್ತಿದ್ದಾರೆ. ಇದೇ ವೇಳೆ ರಾಷ್ಟ್ರಗೀತೆಯ ಗಾಯನ ಕೇಳಿ ಬಂದಿದ್ದು, ಮದುವೆ ಸಂಪ್ರದಾಯ ಮಾಡುತ್ತಿದ್ದವರು ಹಾಗೂ ಹಾಲ್ನಲ್ಲಿ ಕುಳಿತಿದ್ದ ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಿದ್ದಾರೆ.
ವೀಡಿಯೋ ನೋಡಿದ ಅನೇಕರು ನಾವು ಭಾರತೀಯರು ಎಂಬುದಕ್ಕೆ ಹೆಮ್ಮಯಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ವರನನ್ನು ಹೊರತುಪಡಿಸಿ ಎಲ್ಲರಿಗೂ ಇಂದು ಸ್ವಾತಂತ್ರ ದಿನಾಚರಣೆ ಎಂದಿದ್ದಾರೆ.