ಹೊಸದಿಲ್ಲಿ: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬಾರಿ ಸದ್ದು ಮಾಡಿದ್ದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಹಾಗೂ ತಮ್ಮ ನಡುವಣ ಜಗಳದ ಬಗ್ಗೆ ಲಖನೌ ಸೂಪರ್ ಜಯಂಟ್ಸ್ ಹಾಗೂ ಅಫಘಾನಿಸ್ತಾನ ವೇಗಿ ನವೀನ್ ಉಲ್ ಹಕ್ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.
ಮೇ. 1 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ನಡೆದಿದ್ದ ಲೋ ಸ್ಕೋರಿಂಗ್ ಪಂದ್ಯದಲ್ಲಿ 18 ರನ್ ಅಂತರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿತ್ತು. ಲಖನೌ ಇನಿಂಗ್ಸ್ನಲ್ಲಿ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ನೀಡುವ ವೇಳೆಯೂ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ನಡುವೆಯೂ ಮಾತಿಗೆ ಮಾತು ಬೆಳೆದಿತ್ತು.
ಅಷ್ಟೇ ಅಲ್ಲದೆ ಪಂದ್ಯದ ಮುಗಿದ ಬೆನ್ನಲ್ಲೆ ಡಗ್ಔಟ್ನಿಂದ ಮೈದಾನಕ್ಕೆ ಬಂದ ಲಖನೌ ಸೂಪರ್ ಜಯಂಟ್ಸ್ ಮೆಂಟರ್ ಗೌತಮ್ ಗಂಭೀರ್ ಅವರು, ವಿರಾಟ್ ಕೊಹ್ಲಿಯನ್ನು ನಿಂದಿಸಿದ್ದರು. ಈ ವೇಳೆ ನಡೆದಿದ್ದ ಜಗಳದಲ್ಲಿ ಇವರಿಬ್ಬರೂ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಆದರೆ, ಕೆ.ಎಲ್ ರಾಹುಲ್ ಹಾಗೂ ಅಮಿತ್ ಮಿಶ್ರಾ ಪರಿಸ್ಥಿತಿಯನ್ನು ತಣ್ಣಗಾಗಿಸಿದ್ದರು.
ಐಪಿಎಲ್ ಸೇರಿದಂತೆ ವಿಶ್ವದ ಬಹುತೇಕ ಫ್ರಾಂಚೈಸಿ ಲೀಗ್ಗಳಲ್ಲಿ ಕಾಣಿಸಿಕೊಳ್ಳುವ ಅಫಘಾನಿಸ್ತಾನ ವೇಗಿ ನವೀನ್ ಉಲ್ ಹಕ್ ಅವತ್ತು ಜಗಳ ಆರಂಭಿಸಿದ್ದೇ ವಿರಾಟ್ ಕೊಹ್ಲಿ ಎಂದು ಗಂಭೀರ ಆರೋಪ ಮಾಡಿದ್ದಾರೆ. “ಪಂದ್ಯದಲ್ಲಾಗಲಿ ಅಥವಾ ಪಂದ್ಯ ಮುಗಿದ ನಂತರ ನಾನು ಯಾವುದೇ ಅಸಭ್ಯ ಪದ ಬಳಕೆ ಮಾಡಿರಲಿಲ್ಲ ಹಾಗೂ ಜಗಳ ಕೂಡ ಮಾಡಿರಲಿಲ್ಲ. ಪಂದ್ಯ ಮುಗಿದ ನಂತರ ಹಸ್ತಲಾಘವ ಮಾಡುವ ಸಮಯದಲ್ಲಿ ವಿರಾಟ್ ಕೊಹ್ಲಿಯೇ ಜಗಳ ಆರಂಭಿಸಿದ್ದರು,” ಎಂದು ಸಂದರ್ಶನವೊಂದರಲ್ಲಿ ನವೀನ್ ಉಲ್ ಹಕ್ ಆರೋಪಿಸಿದ್ದಾರೆ.
“ಪಂದ್ಯ ಮುಗಿದ ನಂತರ ಅಂಪೈರ್ಗಳು ದಂಡ ವಿಧಿಸಿರುವ ವಿಧಾನ ಗಮನಿಸಿದರೆ ಜಗಳ ಯಾರು ಆರಂಭಿಸಿದ್ದರು ಎಂದು ನಿಮಗೆ ಚೆನ್ನಾಗಿ ಅರ್ಥವಾಗುತ್ತದೆ,” ಎಂದು ಹೇಳಿದ ನವೀನ್, “ನಾನು ಸಾಮಾನ್ಯವಾಗಿ ಯಾರನ್ನು ಸ್ಲೆಡ್ಜ್ ಮಾಡಲು ಹೋಗುವುದಿಲ್ಲ, ಹಾಗೇನಾದರೂ ಮಾಡಿದರೆ ಒಬ್ಬ ಬೌಲರ್ ಆಗಿ ಬ್ಯಾಟರ್ಗಳ ವಿರುದ್ಧ ಮಾತ್ರ ಮಾಡುತ್ತೇನೆ. ಇದು ಕೇವಲ ಮೈದಾನದಲ್ಲಿ ಮಾತ್ರ. ಆದರೆ ಅಂದಿನ ಪಂದ್ಯದಲ್ಲಿ ಯಾರನ್ನೂ ಸ್ಲೆಡ್ಜ್ ಮಾಡಿರಲಿಲ್ಲ ಮತ್ತು ಒಂದು ಅಸಹ್ಯ ಪದವನ್ನೂ ಬಳಸಿರಲಿಲ್ಲ,” ಎಂದಿದ್ದಾರೆ.
ಅಂದು ನಡೆದ ಜಗಳದಲ್ಲಿ ನಾನು ಹೇಗೆ ಸಿಕ್ಕಿ ಹಾಕಿಕೊಂಡಿದ್ದೆ ಎಂಬುದು ಅಲ್ಲಿದ್ದ ಆಟಗಾರರಿಗೆ ಚೆನ್ನಾಗಿ ಗೊತ್ತಿದೆ. ನಾನು ಯಾವತ್ತೂ ನನ್ನ ತಾಳ್ಮೆಯನ್ನು ಕಳೆದುಕೊಂಡಿಲ್ಲ. ನಾನು ಬ್ಯಾಟ್ ಮಾಡುವಾಗ ಹಾಗೂ ನಂತರವೂ ಶಾಂತವಾಗಿಯೇ ವರ್ತಿಸಿದ್ದೆ. ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿಗೆ ಹಸ್ತಲಾಘವ ಮಾಡಿ ಮುಂದೆ ಹೋಗುತ್ತಿದ್ದೆ. ಆದರೆ ಅವರು ನನ್ನ ಕೈಯನ್ನು ಬಲವಾಗಿ ಹಿಡಿದಿದ್ದ ಕಾರಣ ನನಗೆ ತುಂಬಾ ಕೋಪ ಬಂತು. ಹಾಗಾಗಿ ನಾನು ನನ್ನ ಕೈಯನ್ನು ಎಳೆದುಕೊಂಡೆ. ಏಕೆಂದರೆ ನಾನು ಕೂಡ ಮನುಷ್ಯ. ನನಗೂ ಕೋಪ ಬರುತ್ತದೆ,” ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.