ಖ್ಯಾತ ನಟಿ ನಯನತಾರಾ ನಟನೆಯ ‘ಅನ್ನಪೂರ್ಣಿ’ ಸಿನಿಮಾವನ್ನು ಕೊನೆಗೂ ನೆಟ್ ಫಿಕ್ಸ್ ತೆಗೆದು ಹಾಕಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಸಿನಿಮಾ ಬಗ್ಗೆ ದೂರು ಕೂಡ ದಾಖಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರದ ವಿರುದ್ಧ ಪ್ರತಿಭಟನೆ ಕೂಡ ಮಾಡಲಾಗಿತ್ತು.
ನಾನಾ ಕಡೆಗಳಲ್ಲಿ ಅನ್ನಪೂರ್ಣಿ ಸಿನಿಮಾ ಬಗ್ಗೆ ದೂರುಗಳು ದಾಖಲಾಗುತ್ತಿದ್ದಂತೆಯೇ ಒಟಿಟಿಯಿಂದಲೇ ಚಿತ್ರವನ್ನು ತೆಗೆದು ಹಾಕಲಾಗಿದೆ. ಈ ಚಿತ್ರದಲ್ಲಿ ಶ್ರೀರಾಮನನ್ನು ಮಾಂಸಾಹಾರಿಯಾಗಿ ತೋರಿಸಲಾಗಿತ್ತು. ಇಂತಹ ವಿವಾದಿತ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಅನ್ನಪೂರ್ಣಿ ಒಟಿಟಿಯಲ್ಲಿ ಸಿಗಲಾರದು.
ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಇದು 75ನೇ ಸಿನಿಮಾ. ಈ ಸಿನಿಮಾದಲ್ಲಿ ನಯನತಾರಾ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅವರ ಗೆಟಪ್ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದರು. ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಯನತಾರಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿಸೆಂಬರ್ನಲ್ಲಿ ‘ಅನ್ನಪೂರ್ಣಿ’ ಎಂಬ ಸಿನಿಮಾ ರಿಲೀಸ್ ಆಗಿತ್ತು. ಒಟಿಟಿಯಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಚಿತ್ರದಲ್ಲಿ ನಯನತಾರಾ ತಂದೆ ಪಾತ್ರದಲ್ಲಿ ಕನ್ನಡದ ನಟ ಅಚ್ಯುತ್ ಕುಮಾರ್ ನಟಿಸಿದ್ದರು. ಅವರ ಮನೋಜ್ಞ ನಟನೆಗೆ ನಯನತಾರಾ ಮೆಚ್ಚುಗೆ ಸೂಚಿಸಿದ್ದರು.