ಏಷ್ಯನ್ ಗೇಮ್ಸ್ ಕ್ರಿಕೆಟ್ 2023 (Asian Games 2023) ಟೂರ್ನಿಯಲ್ಲಿ ಚೀನಾದ ಹಾಂಗ್ಝೌನ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ಇಂದು (ಗುರುವಾರ) ನಡೆದ ಪಂದ್ಯದಲ್ಲಿ ಭಾರತ (India) ಮತ್ತು ಮಲೇಷ್ಯಾ (Malaysia) ಮಹಿಳಾ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ರನ್ ರೇಟ್ ಆಧಾರದ ಮೇಲೆ ಭಾರತ ತಂಡ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಈ ಮೂಲಕ ಮಹಿಳಾ ಕ್ರಿಕೆಟ್ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿದೆ. ಆದರೂ ಭಾರತ ತಂಡ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಟೀಂ ಇಂಡಿಯಾಗೆ ಸ್ಮೃತಿ ಮಂದಾನ (27) ಹಾಗೂ ಶೆಫಾಲಿ ವರ್ಮಾ ಜೋಡಿ ಮೊದಲ ವಿಕೆಟ್ಗೆ 57 ರನ್ ಕಲೆಹಾಕಿ ಉತ್ತಮ ಆರಂಭ ನೀಡಿತು. ಭಾರತ 5.4 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದ್ದಾಗ ಮಳೆ ಸುರಿಯಿತು. ಇದರಿಂದಾಗಿ ಪಂದ್ಯವನ್ನು 15 ಓವರ್ಗಳಿಗೆ ಕಡಿತಗೊಳಿಸಲಾಯಿತು
ಅಬ್ಬರದ ಬ್ಯಾಟಿಂಗ್ ನಡೆಸಿದ ಶೆಫಾಲಿ 39 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ಗಳಿದ್ದ 67 ರನ್ ಸಿಡಿಸಿ ಔಟಾದರು. ಅವರಿಗೆ ಉತ್ತಮ ಸಾಥ್ ನೀಡಿದ ಜೆಮಿಯಾ ರಾಡ್ರಿಗಸ್ 29 ಎಸೆತಗಳಲ್ಲಿ 47 ರನ್ ಬಾರಿಸಿ ಅಜೇಯವಾಗಿ ಉಳಿದರು. ಅವರ ಇನಿಂಗ್ಸ್ನಲ್ಲಿ 6 ಬೌಂಡರಿಗಳು ದಾಖಲಾದವು. ಕೇವಲ 7 ಎಸೆತಗಳನ್ನು ಎದುರಿಸಿದ ರಿಚಾ ಘೋಷ್, 3 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 21 ರನ್ ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು.
ಭಾರೀ ಮಳೆಯ ಕಾರಣ ಪಂದ್ಯವು ಫಲಿತಾಂಶವಿಲ್ಲದೆ ರದ್ದಾಯಿತು. ಸೆಮಿಫೈನಲ್ ಹಣಾಹಣಿಯು ಇದೇ ಕ್ರೀಡಾಂಗಣದಲ್ಲಿ ಸೆ.24 ರಂದು ನಡೆಯಲಿದೆ.