ಪಾವೊ ನೂರ್ಮಿ ಗೇಮ್ಸ್ 2024 ರಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ.
ಅತ್ಯುತ್ತಮ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಸ್ಪರ್ಧೆಯಲ್ಲಿ ಅಂತಿಮವಾಗಿ 85.97 ಮೀಟರ್ ಥ್ರೋನೊಂದಿಗೆ ಚೋಪ್ರಾ ಅಗ್ರಸ್ಥಾನ ಅಲಂಕರಿಸಿದರು.
ನೀರಜ್ ಚೋಪ್ರಾಗೆ ಉತ್ತಮ ಪೈಪೋಟಿ ನೀಡಿದ ಫಿನ್ಲ್ಯಾಂಡ್ನ ಒಲಿವರ್ ಹೆಲ್ಯಾಂಡರ್ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದರು. ಅದರಲ್ಲೂ ದ್ವಿತೀಯ ಸುತ್ತಿನಲ್ಲಿ 83.96 ಮೀಟರ್ಗಳನ್ನು ಎಸೆಯುವ ಮೂಲಕ ಚೋಪ್ರಾ ಅವರನ್ನು ಹಿಂದಿಕ್ಕಿದ್ದರು.
ಆದರೆ ಮೂರನೇ ಸುತ್ತಿನಲ್ಲಿ ನೀರಜ್ ಚೋಪ್ರಾ ತೋಳ್ಬಲವನ್ನು ತೋರಿಸಿದ್ದಾರೆ. ಬರೋಬ್ಬರಿ 85.97 ಮೀಟರ್ ದೂರಕ್ಕೆ ಭರ್ಜಿ ಎಸೆದು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪಾವೊ ನೂರ್ಮಿ ಗೇಮ್ಸ್ 2022 ರಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟು ಕೊಂಡಿದ್ದರು. ಅಂದು ಒಲಿವರ್ ಹೆಲ್ಯಾಂಡರ್ ಅತೀ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದರು. ಒಲಿವರ್ 89.83 ಮೀ ಎಸೆದು ಚಿನ್ನ ಗೆದ್ದರೆ, ನೀರಜ್ ಚೋಪ್ರಾ ಕೂದಲೆಳೆಯ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಇದೀಗ ಹೆಲ್ಯಾಂಡರ್ ಅವರನ್ನು ಹಿಂದಿಕ್ಕಿ ಬಂಗಾರದ ಪದಕಕ್ಕೆ ಕೊರೊಳೊಡ್ಡುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿರುವುದು ವಿಶೇಷವಾಗಿದೆ.