ತಮ್ಮ ಸರಕಾರದ ವಿರುದ್ಧ ಎರಡು ಪ್ರಮುಖ ಪ್ರತಿಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಹೊಸ ಸರಕಾರ ರಚಿಸಲು ಪ್ರಯತ್ನ ನಡೆಸಿರುವ ಹೊರತಾಗಿಯೂ ರಾಜೀನಾಮೆ ನೀಡಲು ನಿರಾಕರಿಸಿರುವ ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ ಪ್ರಚಂಡ, ಮತ್ತೊಮ್ಮೆ ವಿಶ್ವಾಸಮತ ಯಾಚಿಸುವುದಾಗಿ ಘೋಷಿಸಿದ್ದಾರೆ.
ಎರಡು ಪ್ರಮುಖ ಪಕ್ಷಗಳಾದ ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್-ಯುಎಂಎಲ್ ಒಪ್ಪಂದ ಮಾಡಿಕೊಂಡಿದ್ದು ಹೊಸ ರಾಷ್ಟ್ರೀಯ ಸಹಮತದ ಸರಕಾರ ರಚಿಸುವುದಾಗಿ ಘೋಷಿಸಿವೆ. ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹಾದುರ್ ದೆವುಬಾ ಮತ್ತು ಸಿಪಿಎನ್-ಯುಎಂಎಲ್ ಪಕ್ಷದ ಮುಖಂಡ, ಮಾಜಿ ಪ್ರಧಾನಿ ಕೆ.ಪಿ.ಶರ್ಮ ಒಲಿ ಒಪ್ಪಂದಕ್ಕೆ ಬಂದಿದ್ದು ಈಗಿನ ಸಂಸತ್ತಿನ ಕಾರ್ಯಾವಧಿ ಮುಗಿಯುವವರೆಗೆ ಸರದಿಯ ಆಧಾರದಲ್ಲಿ ಪ್ರಧಾನಿ ಹುದ್ದೆಯನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
275 ಸದಸ್ಯ ಬಲ ಹೊಂದಿರುವ ನೇಪಾಳಿ ಸಂಸತ್ನಲ್ಲಿ ನೇಪಾಳಿ ಕಾಂಗ್ರೆಸ್ 89 ಸ್ಥಾನ, ಸಿಪಿಎನ್-ಯುಎಂಎಲ್ 78 ಸ್ಥಾನ ಪಡೆದಿದ್ದು ಒಟ್ಟು 167 ಸದಸ್ಯರನ್ನು ಹೊಂದಿದ್ದು ಬಹುಮತಕ್ಕೆ 138 ಸ್ಥಾನಗಳ ಅಗತ್ಯವಿದೆ.
ಈ ಮಧ್ಯೆ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ(ಮಾವೋವಾದಿ)ದ ಸಭೆಯಲ್ಲಿ ಮಾತನಾಡಿದ `ಪ್ರಚಂಡ’ ರಾಜೀನಾಮೆ ನೀಡುವುದಿಲ್ಲ. ವಿಶ್ವಾಸಮತ ಯಾಚಿಸುವುದಾಗಿ ಹೇಳಿದ್ದಾರೆ. ಒಂದೂವರೆ ವರ್ಷದಿಂದ ಅಧಿಕಾರದಲ್ಲಿರುವ ಪ್ರಚಂಡ ಸಂಸತ್ನಲ್ಲಿ ಮೂರು ಬಾರಿ ವಿಶ್ವಾಸಮತ ಯಾಚಿಸಿ ಗೆಲುವು ಸಾಧಿಸಿದ್ದಾರೆ.