ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನೇ ಆಳುತ್ತಿದ್ದ ನಟ ಅಮಿರ್ ಖಾನ್ ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಅವರ ಯಾವುದೇ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಸಿನಿಮಾಗೆ ಹಾಕಿದ ಬಂಡವಾಳವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲಿನಿಂದ ಕಂಗಾಲಾಗಿದ್ ಆಮಿರ್ ಖಾನ್ ಕೊಂಚ ದಿನಗಳ ಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಇದೀಗ ‘ಸಿತಾರೆ ಜಮೀನ್ ಪರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಅವರಿಗೆ ಅನೇಕ ಪ್ರಶ್ನೆಗಳು ಎದುರಾಗಿವೆ. ಕೆಲವರು ಟ್ರೋಲ್ ಮಾಡಿದ್ದಾರೆ. ಡ್ರಗ್ಸ್ ಬಗ್ಗೆಯೂ ಆಮಿರ್ ಖಾನ್ಗೆ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಆಮಿರ್ ಖಾನ್ ಉತ್ತರ ನೀಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಆಮಿರ್ ಖಾನ್ ಅವರು ಲೈವ್ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಮಾಡಿದ ಕಮೆಂಟ್ಗಳಿಗೆ ಅವರು ಉತ್ತರಿಸಿದ್ದಾರೆ. ಲೈವ್ನಲ್ಲಿ ಮಾತನಾಡುವಾಗ ಆಮಿರ್ ಖಾನ್ ಅವರ ಮುಖ ಬಾಡಿದ ಹಾಗೆ ಕಾಣಿಸಿದೆ. ಇದನ್ನು ಗಮನಿಸಿದ ವ್ಯಕ್ತಿಯೋರ್ವ ‘ಸರ್, ನೀವು ಡ್ರಗ್ಸ್ ತೆಗೆದುಕೊಂಡಿದ್ದೀರಿ ಎನಿಸುತ್ತಿದೆ. ಡ್ರಗ್ಸ್ ಸೇವಿಸುವುದನ್ನು ನಿಲ್ಲಿಸಿ’ ಎಂದು ಕಮೆಂಟ್ ಮಾಡಿದ್ದಾರೆ.
ಆತನ ಪ್ರಶ್ನೆಯನ್ನು ಗಮನಿಸಿದ ಆಮಿರ್, ‘ನೀವು ಏನು ಹೇಳುತ್ತಿದ್ದೀರಿ’ ಎಂದು ಮರುಪ್ರಶ್ನೆ ಮಾಡಿದ್ದಾರೆ. ಆ ಮೂಲಕ ತಾವು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ನಿಮ್ಮ ಸ್ಟೈಲಿಸ್ಟ್ನ ಬದಲಿಸಿ ಎಂದು ಕೂಡ ಕೆಲವರು ಸಲಹೆ ನೀಡಿದ್ದಾರೆ. ‘ನನ್ನ ಸ್ಟೈಲ್ ಭಿನ್ನವಾಗಿರುತ್ತದೆ. ಹಾಗಾಗಿ ಅನೇಕರಿಗೆ ಇಷ್ಟ ಆಗುವುದಿಲ್ಲ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಕೆಲವೇ ದಿನಗಳ ಹಿಂದೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭ ನಡೆಯಿತು. ಆ ಸಮಾರಂಭದಲ್ಲಿ ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಮುಂತಾದವರು ಡ್ಯಾನ್ಸ್ ಮಾಡಿದ್ದಕ್ಕೆ ಕೆಲವರಿಂದ ಟೀಕೆ ವ್ಯಕ್ತವಾಗುತ್ತಿದೆ. ಲೈವ್ ಸೆಷನ್ ವೇಳೆ ಆ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ‘ನಿಮ್ಮ ಮಗಳ ಮದುವೆಯಲ್ಲಿಯೇ ಕುಣಿಯದ ನೀವು ಅಂಬಾನಿ ಕುಟುಂಬದ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿದ್ದು ಯಾಕೆ’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
‘ನಾನು ನನ್ನ ಮಗಳ ಮದುವೆಯಲ್ಲೂ ಡ್ಯಾನ್ಸ್ ಮಾಡಿದ್ದೇನೆ’ ಎಂದು ಹೇಳಿ ಆಮಿರ್ ಖಾನ್ ನಕ್ಕಿದ್ದಾರೆ. ‘ಮುಖೇಶ್ ಅವರ ಸಮಾರಂಭದಲ್ಲಿ ನಾನು ಡ್ಯಾನ್ಸ್ ಮಾಡಿದ್ದು ಯಾಕೆಂದರೆ ಅವರು ನನ್ನ ಆತ್ಮೀಯ ಸ್ನೇಹಿತರು. ಮುಖೇಶ್, ನೀತಾ ಮತ್ತು ಅವರ ಮಕ್ಕಳು ನಮ್ಮ ಕುಟುಂಬ ಇದ್ದಂತೆ. ಅವರ ಸಮಾರಂಭದಲ್ಲಿ ನಾನು ಡ್ಯಾನ್ಸ್ ಮಾಡುತ್ತೇನೆ. ನಮ್ಮ ಸಮಾರಂಭದಲ್ಲಿ ಅವರು ಡ್ಯಾನ್ಸ್ ಮಾಡುತ್ತಾರೆ’ ಎಂದು ಆಮಿರ್ ಖಾನ್ ಪ್ರತಿಕ್ರಿಯಿಸಿದ್ದಾರೆ.