ಬಳ್ಳಾರಿ:- ಬಳ್ಳಾರಿಯ ಅಂಧ್ರ ಗಡಿಭಾಗದ ಕನ್ನಡ ಶಾಲೆಗಳಿಗೆ ಹೊಸ ಅಪತ್ತು ಎದುರಾಗಿದೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ಸಿಬಿಎಸ್’ಸಿ ಪರೀಕ್ಷೆ ನಡೆಸುವಂತೆ ಆಂಧ್ರ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ಆಂಧ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಕುತ್ತಾಗಿ ಪರಿಣಾಮ ಉಂಟಾಗಲಿದೆ.
ಸರ್ಕಾರದ ಈ ದಿಢೀರ್ ಆದೇಶದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಪ್ರತಿವರ್ಷ ನವಂಬರ್ ತಿಂಗಳು ಬಂತೆಂದರೆ ಸಾಕು ಕನ್ನಡ ಕಲರವ ಎಲ್ಲೆಡೆ ರಾರಾಜಿಸುತ್ತದೆ. ಗಡಿಭಾಗದಲ್ಲಿರುವ ಕನ್ನಡ ಶಾಲೆಗಳು ನಾನಾ ಸಂಕಷ್ಟಕ್ಕೆ ಸಿಲುಕಿ ಉಸಿರುಗಟ್ಟುವ ವಾತಾವರಣ ಉಂಟಾಗಿದೆ. ಆಂಧ್ರದ ಅನಂತಪುರ, ಕರ್ನೂಲ್ ಜಿಲ್ಲೆಯಲ್ಲಿ ಸಾವಿರಾರು ಮಕ್ಕಳ ಕನ್ನಡಾಭ್ಯಾಸ ಮಾಡುತ್ತಿದ್ದು, ಆಂಧ್ರ ಸರ್ಕಾರದ ಆದೇಶದಿಂದಾಗಿ 9ನೇ ತರಗತಿಯ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬೇಕು.
ಪ್ರಥಮ ಭಾಷೆಯಾಗಿ ತೆಲುಗು, ತೃತೀಯ ಭಾಷೆಯಾಗಿ ಹಿಂದಿ ಕಲಿಕೆಗಷ್ಟೇ ಅವಕಾಶ ನೀಡಲಾಗಿದೆ. ಕನ್ನಡ ಕಲಿಕೆಗೆ ಅವಕಾಶವೇ ಇಲ್ಲದಂತಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ 11, ಅನಂತಪುರ ಜಿಲ್ಲೆಯಲ್ಲಿ 3 ಕನ್ನಡ ಮಾಧ್ಯಮದ ಪ್ರೌಢಶಾಲೆಗಳಿವೆ. ಎರಡೂ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದು, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಕನ್ನಡ ಮಾಧ್ಯಮ ಬಿಟ್ಟು ಇದ್ದಕ್ಕಿದ್ದಂತೆ ಇಂಗ್ಲಿಷ್ ಮಾಧ್ಯಮಕ್ಕೆ ಬದಲಾವಣೆ ಮಾಡಲಾಗಿದೆ.
ಆಂಧ್ರ ಸರ್ಕಾರದ ಹೊಸ ಆದೇಶದಿಂದ ಕನ್ನಡ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಆತಂಕ ಎದುರಾಗಿದೆ. ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಪರೀಕ್ಷೆಗಳನ್ನು ಬಹಿಷ್ಕರಿಸುವುದಾಗಿ ಕನ್ನಡಪರ ಹೋರಾಟಗಾರರು ಎಚ್ಚರಿಕೆ ನೀಡಲಾಗಿದೆ.