ನವದೆಹಲಿ: ಸೆಪ್ಟೆಂಬರ್ 18-22 ರವರೆಗೂ ಸಂಸತ್ನ ವಿಶೇಷ ಅಧಿವೇಶನ (Special Parliament Session) ನಡೆಯಲಿದ್ದು ಇದೇ ಸಮಯದಲ್ಲಿ ಸಿಬ್ಬಂದಿಯ ಸಮವಸ್ತ್ರ (Uniform) ಬದಲಾವಣೆಗೂ ಸರ್ಕಾರ ನಿರ್ಧರಿಸಿದೆ. ಸೆಪ್ಟೆಂಬರ್ 18 ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ದಿನದಂದು ಸಣ್ಣ ಪೂಜೆಯ ಬಳಿಕ ಹೊಸ ಸಂಸತ್ ಭವನಕ್ಕೆ (New Parliament Building) ಔಪಚಾರಿಕ ಪ್ರವೇಶ ನಡೆಯಲಿದೆ.
ಹೊಸ ಸಂಸತ್ನಲ್ಲಿ ಹೊಸ ಡ್ರೆಸ್ ಕೋಡ್ನೊಂದಿಗೆ (Dress Code) ಸಿಬ್ಬಂದಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಸಂಸತ್ ಭವನದ ಸಿಬ್ಬಂದಿ ಗಾಢ ಗುಲಾಬಿ ಬಣ್ಣದ ನೆಹರು ಜಾಕೆಟ್ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಲಿದ್ದಾರೆ. ಇವರು ಧರಿಸಲಿರುವ ಶರ್ಟ್ ಕಮಲದ ಹೂವಿನ ಶೈಲಿಯಲ್ಲಿ ವಿನ್ಯಾಸಗೊಳಿಸಿದೆ. ಈ ಸಮವಸ್ತ್ರವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್ಐಎಫ್ಟಿ) ರಚಿಸಿದೆ.
ಉಭಯ ಸದನಗಳಲ್ಲಿನ ಮಾರ್ಷಲ್ಗಳ ಉಡುಗೆಯನ್ನೂ ಬದಲಾಯಿಸಲಾಗಿದೆ. ಅವರು ಮಣಿಪುರಿ ಪೇಟವನ್ನು ಧರಿಸಲಿದ್ದಾರೆ. ಸಂಸತ್ ಭವನದ ಭದ್ರತಾ ಸಿಬ್ಬಂದಿಯ ಉಡುಗೆಯೂ ಬದಲಾಗಲಿದ್ದು, ಸಫಾರಿ ಸೂಟ್ಗಳ ಬದಲಿಗೆ, ಅವರಿಗೆ ಮಿಲಿಟರಿ ಉಡುಪು ಹೋಲುವ ಬಟ್ಟೆಯನ್ನು ನೀಡಲಾಗುತ್ತದೆ. ಸೆಪ್ಟೆಂಬರ್ 18 ರಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದ್ದು ಈ ಅವಧಿಯಲ್ಲಿ ಒಂದು ದೇಶ ಒಂದು ಚುನಾವಣೆ, ಮಹಿಳಾ ಮೀಸಲಾತಿ ಹಾಗೂ ಇಂಡಿಯಾ ಬದಲು ದೇಶದ ಹೆಸರನ್ನು ಭಾರತ್ಗೆ ಅಧಿಕೃಗೊಳಿಸುವ ಬಿಲ್ ಮಂಡನೆಯಾಗಬಹುದು ಎನ್ನಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.