ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಲವ್, ರೊಮ್ಯಾನ್ಸ್ ಮತ್ತು ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ದಿಗಂತ್, ಈ ಬಾರಿ ಲೀಗಲ್-ಥ್ರಿಲ್ಲರ್ ಶೈಲಿಯ ʼದ ಜಡ್ಜ್ ಮೆಂಟ್ʼ ಸಿನಿಮಾದಲ್ಲಿ ಹೊಸಥರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಬಿಡುಗಡೆಯಾಗಿರುವ ʼದ ಜಡ್ಜ್ ಮೆಂಟ್ʼ ಸಿನಿಮಾ ಪೋಸ್ಟರ್, ಫಸ್ಟ್ ಲುಕ್ ಮತ್ತು ಟೀಸರ್ಗಳಲ್ಲಿ ನಟ ದಿಗಂತ್ ಪಾತ್ರ ಗಮನ ಸೆಳೆಯುತ್ತಿದ್ದು, ತಮ್ಮ ಹೊಸ ಸಿನಿಮಾ ಮತ್ತು ಹೊಸ ಪಾತ್ರದ ಬಗ್ಗೆ ದಿಗಂತ್ ಒಂದಷ್ಟು ಮಾತನಾಡಿದ್ದಾರೆ.
ʼದ ಜಡ್ಜ್ ಮೆಂಟ್ʼ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?
ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ʼದ ಜಡ್ಜ್ ಮೆಂಟ್ʼ ಸಿನಿಮಾದಲ್ಲಿದೆ. ಇಂದಿನ ಜನರೇಶನ್ನ ಬೆಂಗಳೂರಿನಂತಹ ಸಿಟಿಯಲ್ಲಿರುವ ಯುವಕರನ್ನು ಪ್ರತಿನಿಧಿಸುವಂತೆ ನನ್ನ ಪಾತ್ರವಿದೆ. ತನ್ನ ಇಷ್ಟದಂತೆ ಜೀವನ ನಡೆಸಲು ಹೊರಟ ಹುಡುಗನೊಬ್ಬನ ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು, ಏನೆಲ್ಲ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂಬುದರ ಸುತ್ತ ನನ್ನ ಪಾತ್ರವಿದೆ.
ನಿಮ್ಮ ಪ್ರಕಾರ ʼದ ಜಡ್ಜ್ ಮೆಂಟ್ʼ ಅಂದ್ರೇನು?
ನನ್ನ ಪ್ರಕಾರ, ʼದ ಜಡ್ಜ್ ಮೆಂಟ್ʼ ಒಂದು ಕೋರ್ಟ್ ರೂಂ ಡ್ರಾಮಾ ಸಿನಿಮಾ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ. ಇಂದಿನ ಕಾನೂನು, ನ್ಯಾಯ ವ್ಯವಸ್ಥೆ ಎಲ್ಲದರ ಚಿತ್ರಣ ಈ ಸಿನಿಮಾದಲ್ಲಿದೆ. ಇದೊಂದು ಲೀಗಲ್-ಥ್ರಿಲ್ಲರ್ ಶೈಲಿಯ ಸಿನಿಮಾವಾಗಿರುವುದರಿಂದ, ಇದಕ್ಕಿಂತ ಹೆಚ್ಚಾಗಿ ಸಿನಿಮಾದ ಬಗ್ಗೆ ಏನೂ ಕುತೂಹಲ ಬಿಟ್ಟುಕೊಡಲಾರೆ.
ʼದ ಜಡ್ಜ್ ಮೆಂಟ್ʼ ಸಿನಿಮಾ ಒಪ್ಪಿಕೊಳ್ಳಲು ಕಾರಣ?
ಮೊದಲೇ ಹೇಳಿದಂತೆ, ನಾನು ಇಲ್ಲಿಯವರೆ ಮಾಡಿದ ಸಿನಿಮಾಗಳಿಗಿಂತ ವಿಭಿನ್ನ ಕಥೆ, ಪಾತ್ರ ಎರಡೂ ಈ ಸಿನಿಮಾದಲ್ಲಿದೆ. ರವಿಚಂದ್ರನ್ ಅವರಂಥ ದೊಡ್ಡ ನಟರ ಜೊತೆ ಅಭಿನಯಿಸುವ ಅವಕಾಶ, ತುಂಬ ದೊಡ್ಡ ಸ್ಟಾರ್ ಕಾಸ್ಟಿಂಗ್, ತುಂಬ ವೃತ್ತಿಪರವಾಗಿರುವ ನಿರ್ದೇಶಕ ಗುರುರಾಜ್ ಕುಲಕರ್ಣಿ ಮತ್ತು ಸಿನಿಮಾದ ಬಗ್ಗೆ ತುಂಬ ಪ್ಯಾಶನೇಟ್ ಆಗಿರುವ ತಂಡ. ಇವೆಲ್ಲವೂ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣವಾಯಿತು.
ರವಿಚಂದ್ರನ್ ಜೊತೆಗಿನ ಚಿತ್ರೀಕರಣದ ಅನುಭವ ಹೇಗಿತ್ತು?
ನಾನು ರವಿ ಸರ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಮೊದಲ ಬಾರಿಗೆ ʼದ ಜಡ್ಜ್ಮೆಂಟ್ʼ ಸಿನಿಮಾದಲ್ಲಿ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗಿದೆ. ರವಿ ಸರ್ ಜೊತೆಗೆ ಶೂಟಿಂಗ್ ಮಾಡುವಾಗ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಅವರಿಂದ ಕಲಿತುಕೊಳ್ಳುವುದು, ಮಾತಿಗೆ ಕುಳಿತುಕೊಂಡರೆ ಅವರಿಂದ ತಿಳಿದುಕೊಳ್ಳುವುದು ಸಾಕಷ್ಟು ವಿಷಯಗಳು ಇರುತ್ತದೆ.