ಹೈದರಾಬಾದ್: ಇಲ್ಲಿನ ರಾಜೀವ್ಗಾಂಧಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ (World Cup) ಟೂರ್ನಿಯ ಅಭ್ಯಾಸ ಪಂದ್ಯದಲ್ಲೇ ಪಾಕಿಸ್ತಾನ (Pakistan) ಕ್ರಿಕೆಟ್ ತಂಡಕ್ಕೆ ನ್ಯೂಜಿಲೆಂಡ್ (New Zealand) ತಂಡ ಸೋಲಿನ ರುಚಿ ತೋರಿಸಿದೆ.
ಮೊದಲ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 345 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಕಿವೀಸ್ ಪಡೆ 43.4 ಓವರ್ಗಳಲ್ಲೇ 346 ರನ್ ಬಾರಿಸಿ 5 ವಿಕೆಟ್ಗಳ ಜಯ ಸಾಧಿಸಿತು.
ಚೇಸಿಂಗ್ ಆರಂಭಿಸಿದ ಕಿವೀಸ್ ಪಡೆ ಪಾಕ್ ತಂಡದ ಬೌಲರ್ಗಳನ್ನು ಆರಂಭದಿಂದಲೇ ಪಾಕ್ ಬೌಲರ್ಗಳನ್ನು ಹಿಗ್ಗಾಮುಗ್ಗ ಬೆಂಡೆತ್ತಲು ಶುರು ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ 72 ಎಸೆತಗಳಲ್ಲಿ 97 ರನ್ (16 ಬೌಂಡರಿ, 1 ಸಿಕ್ಸರ್), ಕೇನ್ ವಿಲಿಯಮ್ಸನ್ 50 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 54 ರನ್, ಡೇರಿಲ್ ಮಿಚೆಲ್ 57 ಎಸೆತಗಳಲ್ಲಿ 59 ರನ್ (2 ಸಿಕ್ಸರ್, 3 ಬೌಂಡರಿ) ಗಳಿಸಿದ್ರೆ ಕೊನೆಯಲ್ಲಿ 41 ಎಸೆತಗಳಲ್ಲಿ 65 ರನ್ (6 ಬೌಂಡರಿ, 3 ಸಿಕ್ಸರ್) ಹಾಗೂ ಜೇಮ್ಸ್ ನಿಶಮ್ 21 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸುವುದರೊಂದಿಗೆ 33 ರನ್ ಚಚ್ಚಿ ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪಾಕಿಸ್ತಾನ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಬಳಿಕ ಬಾಬರ್ ಆಜಂ 80 ರನ್ (84 ಎಸೆತ, 8 ಬೌಂಡರಿ, 2 ಸಿಕ್ಸರ್), ಮೊಹಮ್ಮದ್ ರಿಜ್ವಾನ್ 103 ರನ್ (94 ಎಸೆತ, 9 ಬೌಂಡರಿ, 2 ಸಿಕ್ಸರ್), ಸೌದ್ ಶಾಕೀಲ್ 75 ರನ್ (53 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ಅಘಾ ಸಲ್ಮಾನ್ 33 ರನ್ಗಳ ನೆರವಿನಿಂದ 300 ರನ್ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 345 ರನ್ ಕಲೆಹಾಕಿತ್ತು.