ಬೆಂಗಳೂರು,ಡಿಸೆಂಬರ್ 27: ನಮ್ಮ ಮುಂದಿರುವ ಸವಾಲು ದೊಡ್ಡದೇನಲ್ಲ. ಮೋದಿಜೀ ಅವರ ಪರವಾದ ವಾತಾವರಣ ದೇಶ ಮತ್ತು ರಾಜ್ಯದಲ್ಲಿದೆ. ಅಪಾರ ಜನಪ್ರಿಯತೆಯೂ ಅವರಿಗೆ ಇದೆ. ಅವರ ಜನಪ್ರಿಯತೆಯನ್ನು ಮತಗಳನ್ನಾಗಿ ಪರಿವರ್ತಿಸುವುದು ಹೇಗೆ ಎಂಬ ಸವಾಲಿಗೆ ಉತ್ತರ ಕಂಡುಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಬಿ ವೈ ವಿಜಯೇಂದ್ರ ಅವರು ಸಲಹೆ ನೀಡಿದರು. ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. ಆದರೂ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸುವ ಸಂದರ್ಭದಲ್ಲಿ ನಮ್ಮ ವಿರೋಧಿಗಳನ್ನು ಹಗುರವಾಗಿ ಪರಿಗಣಿಸದಿರಿ. ಪ್ರತಿಯೊಂದು ಚುನಾವಣೆಯಲ್ಲೂ ಕೂಡ ವಿವಿಧ ರೀತಿಯ ಸವಾಲುಗಳಿರುತ್ತವೆ. ಆ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಸಾಧನೆ ಮಾಡಲು ನಮ್ಮ ಎದುರಾಳಿಗಳನ್ನು ನಾವು ಹಗುರವಾಗಿ ಪರಿಗಣಿಸಬಾರದು. ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.
ಸ್ವಾತಂತ್ರ್ಯ ಬಂದ ಬಳಿಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಮನೆ ಬಾಗಿಲಿಗೆ ಸೌಲಭ್ಯಗಳನ್ನು ಬಿಜೆಪಿಯ ಕೇಂದ್ರ ಸರಕಾರ ತಲುಪಿಸಿದೆ. ಇತರ ಯಾವ ಸರಕಾರಗಳೂ ಇಂಥ ಕೆಲಸ ಮಾಡಿರಲಿಲ್ಲ. ರಾಜ್ಯದ ಕಾರ್ಯಕರ್ತರ ಮೂಲಕ ಕೇಂದ್ರ ಸರಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸಬೇಕಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಬಲ ತುಂಬುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ, ಬಿಬಿಎಂಪಿ ಚುನಾವಣೆ, ವಿಧಾನಪರಿಷತ್ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ಮುಂದಕ್ಕೆ ಅಡಿ ಇಡಬೇಕು ಎಂದು ಸೂಚಿಸಿದರು. ಅತ್ಯಂತ ಪ್ರಮುಖ ಕಾಲಘಟ್ಟದಲ್ಲಿ ನಮಗೆಲ್ಲರಿಗೂ ರಾಜ್ಯ ಪದಾಧಿಕಾರಿಗಳಾಗಿ ಕೆಲಸ ಮಾಡುವ ಜವಾಬ್ದಾರಿ ಲಭಿಸಿದೆ. ನಾವೆಲ್ಲರೂ ಹೊಣೆಯರಿತು ಕರ್ತವ್ಯ ನಿರ್ವಹಿಸಬೇಕು. ನಮಗೆ ಹೊಣೆಗಾರಿಕೆ ಯಾವ ಕಾಲಘಟ್ಟದಲ್ಲಿ ಲಭಿಸಿದೆ ಎಂಬುದು ಅತ್ಯಂತ ಪ್ರಮುಖವಾದುದು. ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಆಗಬೇಕೆಂಬ ಕಳೆದ ಹಲವಾರು ದಶಕಗಳ ಎಲ್ಲ ಹಿಂದೂ ಕಾರ್ಯಕರ್ತರ ಕನಸು, ಹೋರಾಟ ಇದೀಗ ನನಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಜೀ ಅವರ ಅಮೃತಹಸ್ತದಿಂದ ಅದು ಲೋಕಾರ್ಪಣೆ ಆಗಲಿದೆ ಎಂದರು. ಅದೇ ಕಾಲಘಟ್ಟದಲ್ಲಿ ನಮಗೂ ಜವಾಬ್ದಾರಿ ಲಭಿಸಿದೆ ಎಂದರು.