ಕನ್ನಡದ ‘ಗಿಲ್ಲಿ’ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶಿಸಿ ಸದ್ಯ ಬಹುಭಾಷ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಕುಲ್ ಪ್ರೀತ್ ಸಿಂಗ್ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ರಕುಲ್ ಹಾಗೂ ಜಾಕಿ ಸಖತ್ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ.
ರಕುಲ್ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದಾರೆ. ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಾಕುಲ್ ದಂಪತಿ ಮಿಂಚಿದ್ದು ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.
ಹಲವು ವರ್ಷಗಳಿಂದ ಪ್ರೇಮದಲ್ಲಿದ್ದ ರಕುಲ್, ಜಾಕಿ ಗೋವಾದಲ್ಲಿ ಬೆಳಗ್ಗೆ ಸಿಖ್ ಸಂಪ್ರದಾಯದಂತೆ, ಸಂಜೆ ಸಿಂಧಿ ಸಂಪ್ರದಾಯದಂತೆ ವಿವಾಹವಾದರು. ಗೋವಾದ ಪ್ರತಿಷ್ಟಿತ ಐಟಿಸಿ ಗ್ರ್ಯಾಂಡ್ನಲ್ಲಿ ರಕುಲ್ ಪ್ರೀತ್ ಸಿಂಗ್, ಜಾಕಿ ಭಗ್ನಾನಿ ಮದುವೆ ಸಮಾರಂಭ ನೆರವೇರಿದ್ದು ಮದುವೆಗೆ ಆಪ್ತರು, ಸಂಬಂಧಿಕರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಮೂರು ದಿನಗಳ ಕಾಲ ಸ್ಟಾರ್ ಜೋಡಿಯ ವಿವಾಹ ನಡೆದಿದೆ.
ರಕುಲ್, ಜಾಕಿ ವಿವಾಹಕ್ಕೆ ಬಾಲಿವುಡ್ ನ ನಟ, ನಟಿಯರು ಹಾಜರಾಗಿದ್ದರು. ವರುಣ್ ಧವನ್, ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್, ಇಶಾ ಡಿಯೋಲ್, ಡೇವಿಡ್ ಧವನ್, ಆಯುಷ್ಮಾನ್ ಖುರಾನಾ ಸೇರಿದಂತೆ ಸ್ಟಾರ್ ನಟ-ನಟಿಯರು ವಿವಾಹದಲ್ಲಿ ಭಾಗಿಯಾಗಿದ್ದರು.
ನಟಿ ರಕುಲ್ ಪ್ರೀತ್ ಸಿಂಗ್, ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಗಿಲ್ಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಕುಲ್ ನಂತರ ತೆಲುಗು, ತಮಿಳು ಭಾಷೆಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಕುಲ್ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.