ಸಿಖ್ ಪ್ರತ್ಯೇಕತಾವಾದಿ ಹೋರಾಟಗಾರ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಭಾರತ ಮೂಲದ 52 ವರ್ಷದ ನಿಖಿಲ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಇಂದು ನಿಖಿಲ್ ಗುಪ್ತಾ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಈ ವೇಳೆ ನ್ಯಾಯಾಧೀಶರ ಮುಂದೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಅಮೆರಿಕ ಮನವಿ ಮೇರೆಗೆ ಕಳೆದ ವರ್ಷವೇ ಜೆಕ್ ರಿಪಬ್ಲಿಕ್ನಲ್ಲಿ ಗುಪ್ತಾ ಅವರನ್ನು ಬಂಧಿಸಲಾಗಿತ್ತು. ಭಾನುವಾರ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ತಮ್ಮ ಹಸ್ತಾಂತರ ಪ್ರಶ್ನಿಸಿ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ಜೆಕ್ ನ್ಯಾಯಾಲಯವು ಕಳೆದ ತಿಂಗಳು ತಿರಸ್ಕರಿಸಿತ್ತು.
ಗುಪ್ತಾ ಅವರನ್ನು ಸೋಮವಾರ ಅಮೆರಿಕ ಫೆಡರಲ್ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಅವರು ತಾವು ತಪ್ಪಿತಸ್ಥರಲ್ಲ ಎಂದು
ಹೇಳಿರುವುದಾಗಿ ಅವರ ವಕೀಲ ಜೆಫ್ರಿ ಚಾಬ್ರೋವ್ ಹೇಳಿದ್ದಾರೆ.
ಹೆಸರು ಬಹಿರಂಗಪಡಿಸದ ಭಾರತದ ಸರ್ಕಾರಿ ಅಧಿಕಾರಿ ನಿರ್ದೇಶನದಂತೆ ಗುಪ್ತಾ ಕೆಲಸ ಮಾಡಿದ್ದಾರೆ ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ಅವರ ಸೂಚನೆ ಮೇರೆಗೆ ಪನ್ನು ಹತ್ಯೆಗೆ ವ್ಯಕ್ತಿಯೊಬ್ಬನಿಗೆ ಸುಪಾರಿ ಕೊಟ್ಟಿದ್ದ ಗುಪ್ತಾ, ಮುಂಗಡವಾಗಿ 15 ಸಾವಿರ ಡಾಲರ್ ಹಣವನ್ನೂ ನೀಡಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಭಾರತ ಈ ಆರೋಪಗಳನ್ನು ತಳ್ಳಿಹಾಕಿದ್ದು, ಉನ್ನತಮಟ್ಟದ ತನಿಖೆಗೆ ಆದೇಶಿಸಿದೆ.
ಇದು ನಮ್ಮ ಎರಡೂ ದೇಶಗಳಿಗೆ ಸಂಕೀರ್ಣವಾದ ವಿಷಯವಾಗಿದೆ. ವಿಚಾರಣೆ ಪ್ರಕ್ರಿಯೆಯ ಆರಂಭದಲ್ಲಿ ನಾವು ಯಾವುದೇ ತೀರ್ಮಾನಗಳಿಗೆ ಬರುವುದು ಸೂಕ್ತವಲ್ಲ ಎಂದು ಗುಪ್ತಾ ಅವರ ವಕೀಲ ಚಾಬ್ರೋವ್ ಹೇಳಿದ್ದಾರೆ.