ರಾಮನಗರ: 2023 ಚುನಾವಣ ಕಣದಲ್ಲಿ ಸೋಲನುಭವಿಸಿದ ನಿಖಿಲ್ ಕುಮಾರಸ್ವಾಮಿಯವರು ಚನ್ನಪಟ್ಟಣದಲ್ಲಿ (Channapatna Constituency) ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ . ಕಾಂಗ್ರೆಸ್ನವರು ಎಲ್ಲರೂ ಮಲಗಿರುವ ಮಧ್ಯರಾತ್ರಿಯಂದು ಗ್ರಾಮಸ್ಥರಿಗೆ 3 ಸಾವಿರ ರೂ. ಕೂಪನ್ ಕಾರ್ಡ್ ಕೊಟ್ಟು ಆರ್ಥಿಕವಾಗಿ ಹಿಂದುಳಿದವರಿಗೆ ಹಣದ ಆಮಿಷವೊಡ್ಡಿ ಮತ ಪಡೆದು ಅವರನ್ನ ದಿಕ್ಕುತಪ್ಪಿಸಿದ್ದಾರೆ. ಈ ರೀತಿಯ ಕುತಂತ್ರದಿಂದ ನನ್ನನ್ನ ಸೋಲಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy)ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನನ್ನ ತಂದೆ ನಿಮ್ಮನ್ನೆಲ್ಲ ನಂಬಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು ನೀವು ಅವರ ಕೈಹಿಡಿದ್ರಿ, ಪಕ್ಷ ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆಯೂ ಕೂಡ ನಿಮ್ಮ ಸಮ್ಮುಖದಲ್ಲಿ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಕೈ ಬಿಡದೆ ಗೆಲ್ಲಿಸಿದರು. ಯುವಕರು, ರೈತರು ಎಲ್ಲರೂ ಕುಮಾರಣ್ಣನ ಕೈಹಿಡಿದಿದ್ದಾರೆ. ಕುಮಾರಣ್ಣನ (HD Kumaraswamy) ಮೇಲೆ ಜನರ ಪ್ರೀತಿ ಕಂಡು ನಾನೇ ನಿಬ್ಬೆರಗಾದೆ. ಇಡೀ ರಾಮನಗರ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗೆ ಹೋಲಿಸಿಕೊಂಡ್ರೆ ಅತಿಹೆಚ್ಚು ನಿಷ್ಠಾವಂತ ಕಾರ್ಯಕರ್ತರು ಇರುವುದು ಈ ನಮ್ಮ ಚನ್ನಪಟ್ಟಣದಲ್ಲೆ. ನಾನು ಸೋತಿರಬಹುದು, ಆದರೆ ರಾಮನಗರದ ಜನ ನನಗೆ ನಿಷ್ಕಲ್ಮಶವಾದ ಪ್ರೀತಿ ಕೊಟ್ಟಿದ್ದಾರೆ. ಅದನ್ನು ಕೇವಲ ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಎಂದಿಗೂ ನಾನು ನಿಮಗೆ ಚಿರಋಣಿಯಾಗಿರುವೆ. ನಿಮ್ಮ ಜೊತೆಯಲ್ಲಿ ನಾನು ನನ್ನ ಕುಟುಂಬ ಇರುತ್ತದೆ. ಸೋತ ಮಾತ್ರಕ್ಕೆ ಮನೆಯಲ್ಲಿ ನಾನು ಕೈಚೆಲ್ಲಿ ಕೂರುವುದಿಲ್ಲ. ನಿಮ್ಮ ಜೊತೆ ಸದಾ ಇರುತ್ತೇನೆ. ಸೋಲು-ಗೆಲುವು ನಮ್ಮ ಕುಟುಂಬಕ್ಕೆ ಹೊಸತಲ್ಲ ಇದೆಲ್ಲವೂ ನಮಗೆ ರೂಢಿಯಾಗಿದೆ ಎಂದಿದ್ದಾರೆ.