ಕೇರಳ: ಕೊರೊನಾ ನಂತರ ದೇಶವೇ ಭಯಪಡುವಂತೆ ಮಾಡಿದ ಹೊಂದು ಮಾರಣಾಂತಿಕ ಸೋಂಕು ಈ ನಿಫಾ ವೈರಸ್ ಎನ್ನಬಹುದು. ವಿಶೇಷವಾಗಿ ಈ ವೈರಸ್ ಹೆಚ್ಚಾಗಿ ಕೇರಳದಲ್ಲೇ ಕಂಡುಬರುತ್ತಿದೆ. ಮಲಪ್ಪುರಂ ಜಿಲ್ಲೆಯ ಪಂಡಿಕ್ಕಾಡ್ನಲ್ಲಿ ಜುಲೈ ತಿಂಗಳಲ್ಲಿ ನಿಫಾ ಸೋಂಕಿನಿಂದ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಬಾವಲಿಗಳ ಮಾದರಿಯಲ್ಲಿ ನಿಫಾ ವೈರಸ್ ಇರುವುದು ಪತ್ತೆಯಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಕುರಿತು ಮಾತನಾಡಿದ್ದು, ಐದು ಕಿಲೋಮೀಟರ್ ವ್ಯಾಪ್ತಿಯೊಳಗೆ ಸಂಗ್ರಹಿಸಲಾದ 27 ಬಾವಲಿಗಳ ಮಾದರಿಗಳಲ್ಲಿ ಆರರಲ್ಲಿ ವೈರಸ್ ಕಂಡುಬಂದಿದೆ.
ನಿಫಾ ಪ್ರೋಟೋಕಾಲ್ ಪ್ರಕಾರ ನಡೆಸಿದ ಸೋಂಕಿತ ವ್ಯಕ್ತಿಯ ಸಂಪರ್ಕ ಪಟ್ಟಿಯಲ್ಲಿರುವವರ ಎಲ್ಲಾ ಪರೀಕ್ಷೆಗಳು ವೈರಸ್ಗೆ ಇದುವರೆಗೆ ನಕಾರಾತ್ಮಕವಾಗಿವೆ ಎಂದು ಸಚಿವರು ಹೇಳಿದರು. ಒಟ್ಟು 472 ಜನರು ಸಂಪರ್ಕ ಪಟ್ಟಿಯಲ್ಲಿದ್ದಾರೆ ಮತ್ತು ಕಡ್ಡಾಯವಾಗಿ 21 ದಿನಗಳ ಪ್ರತ್ಯೇಕ ಅವಧಿಯನ್ನು ಪೂರ್ಣಗೊಳಿಸಿದ 261 ವ್ಯಕ್ತಿಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು.