ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆಯೇ ಹಣಕಾಸು ಇಲಾಖೆ ಕಚೇರಿಗೆ ಭೇಟಿ ನೀಡಿದರು. ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದೆ.
ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಇಲಾಖೆ ಅಧಿಕಾರಿಗಳು ಬಜೆಟ್ ಪ್ರತಿಯನ್ನು ನೀಡಿದರು. ಬಳಿಕ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್ ಚೌಧರಿ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಬಜೆಟ್ ಪ್ರತಿ ಜೊತೆ ಫೋಟೋ ಪೋಸ್ ನೀಡಿದರು.
ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವಾಲಯದ ನಾರ್ತ್ ಬ್ಲಾಕ್ ಕಚೇರಿಗೆ ಬಂದಿದ್ದ ಸಚಿವೆ, ಅಲ್ಲಿಂದ ಡಿಜಿಟಲ್ ಸ್ವರೂಪದಲ್ಲಿರುವ ಬಜೆಟ್ ಪ್ರತಿಯೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನಕ್ಕೆ ತೆರಳಿದರು. ಈ ವೇಳೆ ತಮ್ಮ ತಂಡದೊಂದಿಗೆ ಕೆಂಪು ಬಣ್ಣದ ‘ಬಹಿ ಖಾತಾ’ ಡಿಜಿಟಲ್ ಟ್ಯಾಬ್ಲೆಟ್ನೊಂದಿಗೆ (ಬಜೆಟ್ ಪ್ರತಿ) ಫೋಟೋಗೆ ಪೋಸ್ ನೀಡಿದರು.
2021ರಿಂದ ನಿರ್ಮಲಾ ಸೀತಾರಾಮನ್ ಅವರು ಕಾಗದ ರಹಿತ ಬಜೆಟ್ಗೆ ಒತ್ತು ನೀಡುತ್ತಿದ್ದು, ಮೇಡ್ ಇನ್ ಇಂಡಿಯಾ ಟ್ಯಾಬ್ ಮೂಲಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಹಣಕಾಸು ಇಲಾಖೆಯಿಂದ ಸಂಸತ್ ಭವನಕ್ಕೆ ತೆರಳಲಿರುವ ನಿರ್ಮಲಾ ಸೀತಾರಾಮನ್ 11 ಗಂಟೆಗೆ ಬಜೆಟ್ ಭಾಷಣ ಓದಲಿದ್ದಾರೆ.