ಬರ್ರೆನ್: ನಿತ್ಯಾನಂದನಿಗೆ ಭಾರತ ಕಿರುಕುಳ ನೀಡುತ್ತಿಲ್ಲ. ಆದ್ರೆ ಭಾರತದಲ್ಲಿರುವ ಕೆಲವು ಹಿಂದೂ ವಿರೋಧಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕೈಲಾಸ ಯುನೈಟೆಡ್ ಸ್ಟೇಟ್ಸ್ನ ಶಾಶ್ವತ ರಾಯಭಾರಿ ವಿಜಯಾಪ್ರಿಯಾ ನಿತ್ಯಾನಂದ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಜಿನಿವಾದಲ್ಲಿ ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆಯಲ್ಲಿ ಸ್ವಯಂಘೋಷಿತ ದೇವಮಾನವ ಹಾಗೂ ಕೈಲಾಸ ದೇಶದ ಸಂಸ್ಥಾಪಕ ಸ್ವಾಮಿ ನಿತ್ಯಾನಂದನ ಶಿಷ್ಯೆ ಭಾಗವಹಿಸಿದ್ದರು ಎಂದು ಹೇಳಲಾಗಿತ್ತು. ಈ ಸಭೆಯಲ್ಲಿ ನಿತ್ಯಾನಂದಗೆ ತನ್ನ ಜನ್ಮಸ್ಥಳದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ನಿತ್ಯಾನಂದನ ಶಿಷ್ಯೆ ವಿಜಯಾಪ್ರಿಯಾ ಹಿಂದೂ ವಿರೋಧಿಗಳ ವಿರುದ್ಧ ಕ್ರಮಕ್ಕೆ ಅಗ್ರಹಿಸಿದ್ದಾರೆ.
ಫೆಬ್ರವರಿ 24 ರಂದು ಮಹಾಸಭೆಯಲ್ಲಿ ನೀಡಿದ್ದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಿತ್ಯಾನಂದ ತಮ್ಮ ಜನ್ಮಸ್ಥಳದಲ್ಲಿ ಕೆಲವು ಹಿಂದೂ ವಿರೋಧಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ನಾನು ಹೇಳಿದ್ದೆ. ಕೈಲಾಸ ಯುನೈಟೆಡ್ ಸ್ಟೇಟ್ಸ್ ಭಾರತವನ್ನು ಉನ್ನತ ಗೌರವದಿಂದಲೇ ಕಾಣುತ್ತದೆ. ಈಗಲೂ ಭಾರತವನ್ನು ಗುರುಪೀಠವೆಂದೇ ಗೌರವಿಸುತ್ತದೆ ಎಂದು ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಕಳಕಳಿ ಏನಿದ್ದರೂ ಹಿಂದೂ ವಿರೋಧಿ ಅಂಶಗಳ ಕಡೆಗೆ ಮಾತ್ರ ಕೇಂದ್ರೀಕೃತವಾಗಿದೆ. ಹಿಂದೂ ಧರ್ಮ ಮತ್ತು ಕೈಲಾಸದ ಪರಮೋಚ್ಚ ಮಠಾಧೀಶರ ವಿರುದ್ಧ ಹಿಂಸಾಚಾರ ಮುಂದುವರೆಸುವ ಇಂತಹ ಅಂಶಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.